ಬಳ್ಳಾರಿ: ಗ್ರಂಥಾಲಯ ಶುಲ್ಕ ಮಹಾನಗರ ಪಾಲಿಕೆಯಿಂದ ಹಂತಹಂತವಾಗಿ ಒದಗಿಸಲು ಕ್ರಮ: ಶಾಸಕ ಸೋಮಶೇಖರ್ ರೆಡ್ಡಿ

ಬಳ್ಳಾರಿ, ಡಿ.17: ಬಳ್ಳಾರಿ ನಗರ ಕೇಂದ್ರ ಗ್ರಂಥಾಲಯಕ್ಕೆ ಮಹಾನಗರ ಪಾಲಿಕೆ ವತಿಯಿಂದ ಬರಬೇಕಿದ್ದ 3.32ಕೋಟಿ ರೂ.ಗಳ ಗ್ರಂಥಾಲಯ ಶುಲ್ಕವನ್ನು ಹಂತಹಂತವಾಗಿ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಹೇಳಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ನಗರ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ಬುಧವಾರ ಸಂಜೆ ನಗರ ಕೇಂದ್ರದ ಗ್ರಂಥಾಲಯ ವಿಸ್ತರಣಾ ಕಟ್ಟಡ, ಸ್ಪರ್ಧಾತ್ಮಕ ಅಧ್ಯಯನ ಕೇಂದ್ರ ಮತ್ತು ಡಿಜಿಟಲ್ ಗ್ರಂಥಾಲಯ ಹಾಗೂ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕ ಗ್ರಂಥಾಲಯವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಡಿಜಿಟಲೀಕರಣವನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಇ-ಡಿಜಿಟಲ್ ಗ್ರಂಥಾಲಯ ಪೋರ್ಟಲ್ ಮತ್ತು ಆ್ಯಪ್ ಸ್ಥಾಪಿಸಿದ್ದು, ಲಕ್ಷಾಂತರ ಸಾರ್ವಜನಿಕರು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ಸ್ಪರ್ಧಾಳುಗಳು, ಅಸಂಖ್ಯಾತ ಪುಸ್ತಕ ಪ್ರೇಮಿಗಳು ಇದರ ಸದಸ್ಯರಾಗಿ ಉಪಯೋಗಿಸುತ್ತಿರುವುದು ಖುಷಿ ತಂದಿದೆ ಎಂದರು.
ದೇಶದ ಅಭಿವೃದ್ಧಿಗೆ ವಿದ್ಯೆ ತುಂಬಾ ಮುಖ್ಯ. ಇಂದು ಅದೆಷ್ಟೋ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗೆ ಧಾರವಾಡ, ವಿಜಯಪುರದಂತಹ ನಗರಗಳಿಗೆ ಹೋಗುತ್ತಾರೆ. ಇಲ್ಲಿಯೇ ಒಂದು ಸ್ಪರ್ಧಾತ್ಮಕ ಅಧ್ಯಯನ ಕೇಂದ್ರ ಆರಂಭವಾಗಿರುವುದರಿಂದ ಯುವಕರು ಐ.ಎ.ಎಸ್. ಐ.ಪಿ.ಎಸ್ ಆಗಬೇಕೆನ್ನುವ ಕನಸು ಈಡೇರುತ್ತದೆ. ಇದೊಂದು ಉತ್ತಮ ಕಾರ್ಯ ಎಂದರು.
ಬಳ್ಳಾರಿ ನಗರ ಕೇಂದ್ರ ಗ್ರಂಥಾಲಯವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಲೈಬ್ರರಿಗೆ ಪುಸ್ತಕಗಳ ಅಗತ್ಯವಿದ್ದಲ್ಲಿ ನನ್ನ ಅನುದಾನದಡಿ ಒದಗಿಸಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರಾದ ಸತೀಶಕುಮಾರ್ ಹೊಸಮನಿ ಅವರು ಮಾತನಾಡಿ, ಇಡೀ ದೇಶದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಕರ್ನಾಟಕದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇಡೀ ದೇಶಕ್ಕೆ ಮಾದರಿ ಎಂದು ಎರಡು ವರ್ಷಗಳ ಹಿಂದೆ ನವದೆಹಲಿಯಲ್ಲಿ ನಡೆದ ಸಮ್ಮೇಳನದಲ್ಲಿ ಗೌರವಿಸಲಾಗಿದೆ. ರಾಜ್ಯದಲ್ಲಿ 30 ಜಿಲ್ಲಾ ಕೇಂದ್ರ ಗ್ರಂಥಾಲಯ, 100 ಸಮುದಾಯದ ಗ್ರಂಥಾಲಯ, 127 ಕೊಳಚೆ ಕೇಂದ್ರ ಗ್ರಂಥಾಲಯ, ಗ್ರಾಪಂ ಗ್ರಂಥಾಲಯಗಳು, ನಗರ, ಜಿಲ್ಲಾ, ತಾಲೂಕು ಗ್ರಂಥಾಲಯಗಳು ಸೇರಿದಂತೆ 7 ಸಾವಿರ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಶ್ರೀಸಾಮಾನ್ಯನ ಗ್ರಂಥಾಲಯಗಳಾಗಿವೆ ಎಂದರು.
ಕೋವಿಡ್ ಕಾಲಘಟ್ಟದಲ್ಲಿ ಎಲ್ಲ ಗ್ರಂಥಾಲಯಗಳು ಬಾಗಿಲು ಹಾಕಿದ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿ ಡಿಜಿಟಲ್ ಲೈಬ್ರರಿಗೆ ಚಾಲನೆ ನೀಡಲಾಗಿದ್ದು, ರಾಜ್ಯದಲ್ಲಿ 272 ಡಿಜಿಟಲ್ ಲೈಬ್ರರಿಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಕರ್ನಾಟಕ ಡಿಜಿಟಲ್ ಲೈಬ್ರರಿ ಪೋರ್ಟಲ್ ಮತ್ತು ಆ್ಯಪ್‍ನಲ್ಲಿ 1.8ಲಕ್ಷ ಪುಸ್ತಕಗಳು, 4.30ಲಕ್ಷ ಪುಸ್ತಕಗಳು ಹಾಗೂ ಇ-ವಿಡಿಯೋ ಕಂಟೆಂಟ್ ಲಭ್ಯ ಇವೆ. 10ಲಕ್ಷ ಇ-ಕಂಟೆಂಟ್ ಗಳನ್ನು ಶೀಘ್ರವಾಗಿ ಅಪ್ಲೋಡ್ ಮಾಡಲಾಗುತ್ತಿದ್ದು, 14.30 ಲಕ್ಷ ಇ-ಕಂಟೆಂಟ್ ಗಳು ಇನ್ಮುಂದೆ ಇದರಲ್ಲಿ ಲಭ್ಯ ಇರಲಿವೆ. ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ಸಾಹಿತಿಗಳ ಪುಸ್ತಕಗಳು, ಜೆಇಇ,ನೀಟ್ ಸೇರಿದಂತೆ ವಿವಿಧ ವಿಷಯಗಳ ಪುಸ್ತಕಗಳು ಈ ಪೋರ್ಟಲ್ ಮತ್ತು ಆ್ಯಪ್‍ನಲ್ಲಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಗ್ರಂಥಾಲಯಗಳಿಗೆ ಸಂಬಂಧಿಸಿದಂತೆ ಈ ವರ್ಷದಲ್ಲಿ ಗೂಗಲ್‍ನಲ್ಲಿ ಅತಿಹೆಚ್ಚು ಸರ್ಚ್ ಮಾಡಿದ್ದು, ಕರ್ನಾಟಕ ಡಿಜಿಟಲ್ ಗ್ರಂಥಾಲಯ ಮೊದಲ ಸ್ಥಾನದಲ್ಲಿದ್ದರೇ, ಎರಡನೇ ಸ್ಥಾನ ಅಮೆರಿಕಾ ಡಿಜಿಟಲ್ ಗ್ರಂಥಾಲಯ, ನಂತರ ನಮ್ಮ ದೇಶದ ನ್ಯಾಷನಲ್ ಡಿಜಿಟಲ್ ಲೈಬ್ರರಿಯಾಗಿದೆ. 31.51ಕೋಟಿ ಜನರು ನಮ್ಮ ಕರ್ನಾಟಕ ಡಿಜಿಟಲ್ ಗ್ರಂಥಾಲಯ ಸರ್ಚ್ ಮಾಡಿರುವ ಸಂಗತಿಯನ್ನು ಇಲಾಖೆಯ ನಿರ್ದೇಶಕ ಸತೀಶಕುಮಾರ್ ಹೊಸಮನಿ ಹಂಚಿಕೊಂಡರು. 8 ಲಕ್ಷ ಸದಸ್ಯರು ಹೊಸದಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಶಾಸಕ ಸೋಮಶೇಖರ್ ರೆಡ್ಡಿ ಹಾಗೂ ಗಣ್ಯರು ಪುಸ್ತಕ ಪ್ರದರ್ಶನ ಹಾಗೂ ಡಿಜಿಟಲ್ ಲೈಬ್ರರಿ ಕಾರ್ಯವೈಖರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಮಹೇಂದ್ರ, ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಬಿ.ಕೆ.ಲಕ್ಷ್ಮೀಕಿರಣ,ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ರಾಬಕೋ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರ ರೆಡ್ಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ್ವರ ರಂಗಣ್ಣನವರ, ನಿರ್ಮಿತಿ ಕೇಂದ್ರದ ಅಧಿಕಾರಿ ಮೋಹನ್ ಕೃಷ್ಣ ಸೇರಿದಂತೆ ಅನೇಕರು ಇದ್ದರು.

Latest Indian news

Popular Stories