ಬೆಂಗಳೂರು:ನೀರಿನ ಅಗತ್ಯತೆ, ಲಭ್ಯತೆ ಮತ್ತು ಅವಲಂಬನೆಗೆ ಸಂಬಂಧಿಸಿದಂತೆ ಬೆಂಗಳೂರು ಅತ್ಯಂತ ದುರ್ಬಲ ನಗರಗಳಲ್ಲಿ ಒಂದಾಗಿದೆ. ಇತ್ತೀಚಿಗೆ ತಲೆದೋರಿರುವ ಬರದಿಂದಾಗಿ ರಾಜ್ಯದ ರಾಜಧಾನಿಯಲ್ಲಿ ನೀರಿನ ಸ್ಥಿತಿ ಚಿಂತಾಜನಕವಾಗಿದ್ದು, ಪರಿಸರ ಇಲಾಖೆಯು ಪ್ಲಾನ್ ಬಿ ಇಲ್ಲ ಎಂದು ಘೋಷಿಸಿದೆ.
100 ಕಿ.ಮೀ ದೂರದಿಂದ 540 ಮೀಟರ್ ಎತ್ತರಕ್ಕೆ ಪಂಪ್ ಮಾಡುವ ಕಾವೇರಿ ನೀರನ್ನು ಬೆಂಗಳೂರು ಹೆಚ್ಚಾಗಿ ಅವಲಂಬಿಸಿದೆ. ಈ ಕಾರಣದಿಂದಾಗಿ ಇದು ಅತ್ಯಂತ ದುರ್ಬಲವಾಗಿದೆ. ಹೆಚ್ಚಿನ ಸಂಖ್ಯೆಯ ಒಳಚರಂಡಿ ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಹೊಂದಿದ್ದರೂ, ಈ ಘಟಕಗಳ ನೀರಿನ ಬಳಕೆ ಕಡಿಮೆ ಇದೆ.
ಕೆರೆ ನೀರು ಕೂಡ ಬಳಕೆಯಾಗುತ್ತಿಲ್ಲ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಗಮನಿಸಿದರೆ, ಸರ್ಕಾರ ಮತ್ತು ಜನರು ನೀರಿನ ಪರ್ಯಾಯ ಮೂಲಗಳಿಗಾಗಿ ಪ್ಲಾನ್ ಬಿ ಅನ್ನು ನೋಡಬೇಕು, “ಎಂದು ಪರಿಸರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಅಪಾರ್ಟ್‌ಮೆಂಟ್, ವಾಣಿಜ್ಯ ಸಂಸ್ಥೆಗಳು ಪ್ರತಿನಿತ್ಯ ಟ್ಯಾಂಕರ್‌ಗಳಲ್ಲಿ ನೀರು ಖರೀದಿಸುತ್ತಿವೆ ಎಂದು ಇಲಾಖೆ ಅಧಿಕಾರಿಗಳು ಗಮನ ಸೆಳೆದರು. ನಗರದ ಹೊರವಲಯದಲ್ಲಿ ಪರಿಸ್ಥಿತಿ ಹದಗೆಟ್ಟಿದೆ.