
ಬೀದರ್: ಜಿಕೆ ಕನ್ಸ್ಟ್ರಕ್ಷನ್ಸ್ ಕ್ರಷರ್ ಮೇಲೆ ದಾಳಿ, ಜಿಲೆಟಿನ್ ಜಪ್ತಿ
ಬೀದರ್,ಫೆ.25:- ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಂಭವಿಸಿರುವ ಜಿಲೆಟಿನ್ ಸ್ಫೋಟದ ನಂತರ ರಾಜ್ಯದ ಇತರೆ ಜಿಲ್ಲೆಗಳಲಿರುವ ಕ್ರಷರ್ ಮೇಲೆ ಪೊಲೀಸರು ನಿಗಾ ಇಡಲಾರಂಭಿಸಿದ್ದಾರೆ.
ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ್ ಅವರಿಗೆ ಸೇರಿದ ಜಿಕೆ. ಕನ್ಸ್ಟ್ರಕ್ಷನ್ಸ್ ಕ್ರಷರ್ ಮೇಲೆ ದಾಳಿ ಮಾಡಿರುವ ಪೊಲೀಸರು 16 ಕ್ವಿಂಟಾಲ್ ಜಿಲೆಟಿನ್ ಜಪ್ತಿ ಮಾಡಿಕೊಂಡಿದ್ದಾರೆ.
ಬೀದರ್ ತಾಲೂಕಿನ ಸುಲ್ತಾನಪುರ ಬಳಿ ತೆಲಂಗಾಣಕ್ಕೆ ಹೊಂದಿಕೊಂಡಿರುವ ಕ್ರಷರ್ ಮೇಲೆ ಬುಧವಾರ ಪೊಲೀಸರು ದಾಳಿ ನಡೆಸಿದ್ದಾರೆ. 67 ಬಾಕ್ಸ್ಗಳಲ್ಲಿ ತುಂಬಿಡಲಾಗಿದ್ದ 75 ಕಿಲೋ ಜಿಲೆಟಿನ್, 500 ಮೀಟರ್ ನಾನ್ ಎಲೆಕ್ಟಿಡ್ ಡೆಟಿನೇಟರ್ ಜಪ್ತಿ ಮಾಡಿಕೊಳ್ಳಲಾಗಿದೆ.
ಈ ಸಂಬಂಧ ಕ್ರಷರ್ ಮಾಲಿಕ ಮತ್ತು ಟಿಪ್ಪರ್ ಚಾಲಕನ ವಿರುದ್ಧ ಸ್ಫೋಟಕ ಕಾಯ್ದೆ ಅಡಿ ಬೀದರ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಬಸವೇಶ್ವರ ಹೀರಾ, ಗ್ರಾಮೀಣ ಸಿಪಿಐ ಶ್ರೀಕಾಂತ ಅಲ್ಲಾಪುರ, ಪಿಎಸ್ಐ ಸುವರ್ಣಾ ಮತ್ತಿತರ ಸಿಬ್ಬಂದಿ ಪರಿಶೀಲನೆ ನಡೆಸಿದರು.
ಕ್ರಷರ್ ತೆಲಂಗಾಣದಲ್ಲಿ ಇದ್ದು, ಜಿಲೆಟಿನ್ ಸಂಗ್ರಹಕ್ಕೆ ಸಂಬಂಧಿಸಿದ ಪರವಾನಗಿ ಮತ್ತಿತರ ದಾಖಲೆಗಳು ಇವೆ. ದಾಳಿ ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಈ ದಾಖಲೆಗಳನ್ನು ತೋರಿಸಲಾಗಿದೆ ಎಂದು ಗುರುನಾಥ ಕೊಳ್ಳೂರ್ ಹೇಳಿದ್ದಾರೆ.




