
ಬೀದರ್: ಗುಣಮಟ್ಟದ ಬೀಜೋತ್ಪಾದನೆ, ಸೂಕ್ಷ್ಮ ನೀರಾವರಿ ತಂತ್ರಜ್ಞ ಕೌಶಲ್ಯ ಅಭಿವೃದ್ಧಿ ತರಬೇತಿ
ಬೀದರ್, ಡಿಸೆಂಬರ್ 12: ಕೃಷಿ ವಿಜ್ಞಾನ ಕೇಂದ್ರ ಬೀದರನಲ್ಲಿ ಗುಣಮಟ್ಟದ ಬೀಜೋತ್ಪಾದನೆ ಹಾಗೂ ಸೂಕ್ಷ್ಮ ನೀರಾವರಿ ತಂತ್ರಜ್ಞ ಕುರಿತು ಕೌಶಲ್ಯ ಅಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಜನವಾಡ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ ಬೀದರನಲ್ಲಿ, ಭಾರತೀಯ ಕೃಷಿ ಕೌಶಲ್ಯ ಅನುಸಂಧಾನದ ವತಿಯಿಂದ ಬೀದರ ಜಿಲ್ಲೆಯ ಆಸಕ್ತ ರೈತರು ಮತ್ತು ಗ್ರಾಮೀಣ ಯುವಕ-ಯುವತಿಯರಿಗಾಗಿ ವಿಶೇಷ ಕೌಶಲ್ಯ ಅಭಿವೃದ್ಧಿಯಡಿ ಗುಣಮಟ್ಟದ ಬೀಜೋತ್ಪಾದನೆ ಹಾಗೂ ಸೂಕ್ಷ್ಮ ನೀರಾವರಿ ತಂತ್ರಜ್ಞ ಕುರಿತು ಎರಡು ಪ್ರತ್ತೇಕ ತರಬೇತಿಗಳನ್ನು ಕೃಷಿ ವಿಜ್ಞಾನ ಕೇಂದ್ರ ಬೀದರನಲ್ಲಿ ಹಮ್ಮಿಕೊಳ್ಳಲಾಗುವುದು.
ಸದರಿ ತರಬೇತಿಗಳಲ್ಲಿ ವೈಜ್ಞಾನಿಕ ಪದ್ಧತಿಗಳ ಮಾಹಿತಿ ಹಾಗೂ ಪ್ರಾಯೋಗಿಕ ಅನುಭವಗಳನ್ನು ನೀಡಿ ವೃತ್ತಿಪರ ಉದ್ಯೋಗಕ್ಕಾಗಿ ಅವರ ಕೌಶಲ್ಯಕ್ಷಮತೆ ವೃದ್ದಿಸಿ ಆದಾಯ ಹೆಚ್ಚಿಸುವುದು ತರಬೇತಿಯ ಉದ್ದೇಶವಾಗಿದೆ. ಪ್ರತಿ ತರಬೇತಿಗೆ 20 ಜನ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ತರಬೇತಿಯು 25 ದಿನಗಳವರೆಗೆ ಜರುಗುತ್ತದೆ. ತರಬೇತಿಯಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ರೈತರು-ಗ್ರಾಮೀಣ ಯುವಕರು ಮತ್ತು ಯುವತಿಯರು ಜನವಾಡ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅರ್ಜಿ ಪಡೆದು, ಭಾವಚಿತ್ರ, ಪಾಹಣಿ, ಆಧಾರಕಾರ್ಡ್, ಮತ್ತು ವಿದ್ಯಾರ್ಹತೆ ಪ್ರಮಾಣ ಪತ್ರ ಲಗತ್ತಿಸಿ, ಡಿಸೆಂಬರ್ 25ನೇ ದಿನಾಂಕದೊಳಗಾಗಿ ಅವುಗಳನ್ನು ತುಂಬಿದ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಆದ್ಯತೆ ಮೇರೆಗೆ ಪ್ರತಿ ತರಬೇತಿಗೆ ಮೊದಲು ಅರ್ಜಿ ಸಲ್ಲಿಸಿದ 20 ಜನರಿಗೆ ಮಾತ್ರ ಪರಿಗಣಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಗುಣಮಟ್ಟದ ಬೀಜೋತ್ಪಾದನೆ ತರಬೇತಿಗಾಗಿ ಕೃಷಿ ವಿಜ್ಞಾನಕೇಂದ್ರದ ವಿಜ್ಞಾನಿ ಡಾ. ಆರ್. ಎಲ್. ಜಾಧವ (ಬೇಸಾಯ ಶಾಸ್ತ್ರ) ಮೋ. ಸಂಖ್ಯೆ: 9972146214 ಹಾಗೂ ಸೂಕ್ಷ್ಮ ನೀರಾವರಿ ತಂತ್ರಜ್ಞಾನ ತರಬೇತಿಗಾಗಿ ಡಾ. ನಿಂಗದಳ್ಳಿ ಮಲ್ಲಿಕಾರ್ಜುನ ವಿಜ್ಞಾನಿ (ತೋಟಗಾರಿಕೆ) ಮೋ ಸಂಖ್ಯೆ: 9980102727 ರವರಿಗೆ ಸಂಪರ್ಕಿಸಬಹುದು ಎಂದು ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಕೃಷಿ ವಿಜ್ಞಾನ ಕೇಂದ್ರದ ಪ್ರಕಟನೆ ತಿಳಿಸಿದೆ.




