
BREAKING NEWS: ಗೂಗಲ್, ಜಿಮೇಲ್, ಯೂಟ್ಯೂಬ್, ಡಾಕ್ಸ್, ಮ್ಯಾಪ್ಸ್ ಸೇವೆಗಳು ಸ್ತಬ್ಧ
ಬೆಂಗಳೂರು,ಡಿ.14(ಆನ್ಲೈನ್ ಡೆಸ್ಕ್):- ವಿಶ್ವದ ಹಲವು ದೇಶಗಳಲ್ಲಿ ಗೂಗಲ್ನ ಸೇವೆಗಳು ಸ್ತಬ್ಧಗೊಂಡಿವೆ. ಸಾಮಾಜಿಕ ಮಾಧ್ಯಮಗಳಲ್ಲಿ #googledown ಹ್ಯಾಷ್ಟ್ಯಾಗ್ನೊಂದಿಗೆ ತಮ್ಮ ಸಮಸ್ಯೆಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಗೂಗಲ್ನ ಪ್ರಮುಖ ಸೇವೆಗಳಾದ ಜಿಮೇಲ್, ಯೂಟ್ಯೂಬ್, ಡಾಕ್ಸ್, ಮ್ಯಾಪ್ಸ್ಗಳನ್ನು ದೈನಂದಿನ ಕಾರ್ಯನಿರ್ವಹಣೆಗೆ ಅವಲಂಬಿಸಿದ್ದವರು ಗೂಗಲ್ ಸರ್ವರ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಸೇವೆಯಲ್ಲಿ ವ್ಯತ್ಯಯ ಉಂಟಾಗಿರುವ ಸಂಬಂಧ ಪ್ರತಿಕ್ರಿಯಿಸಿರುವ ಯುಟ್ಯೂಬ್, ‘ನಿಮಗೆ ತೊಂದರೆಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ನಮ್ಮ ತಂಡಕ್ಕೆ ಇದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಶೀಘ್ರ ನೀಡುತ್ತೇವೆ’ ಎಂದು ಯೂಟ್ಯೂಬ್ ಪ್ರತಿಕ್ರಿಯಿಸಿದೆ.
ಗೂಗಲ್ ಡಾಕ್ಸ್ ಬಳಕೆದಾರರಿಗೆ ಎರರ್ ಮೆಸೇಜ್ ಡಿಸ್ಪ್ಲೇ ಆಗುತ್ತಿದೆ. ಇದೇ ಪುಟವನ್ನು ರೀಲೋಡ್ ಮಾಡಲು ಪ್ರಯತ್ನಿಸಿ ಅಥವಾ ಕೆಲ ನಿಮಿಷಗಳ ನಂತರ ಮತ್ತೆ ಡಾಕ್ಸ್ ಓಪನ್ ಮಾಡಿ ಎಂಬ ಸಂದೇಶ ಕಾಣಿಸಿಕೊಳ್ಳುತ್ತಿದೆ. ಆದರೆ ಯುಟ್ಯೂಬ್ ಮಾತ್ರ ಕೋತಿಯ ಚಿತ್ರದೊಂದಿಗೆ, ‘Something went wrong’ ಮೆಸೇಜ್ ಡಿಸ್ಪ್ಲೇ ಮಾಡುತ್ತಿದೆ.
ಜಿಮೇಲ್ ಬಳಕೆದಾರರಿಗೆ ‘ದಯವಿಟ್ಟು ಕ್ಷಮಿಸಿ, ನಿಮ್ಮ ಅಕೌಂಟ್ ಕೆಲ ಸಮಯ ಆಕ್ಸೆಸ್ ಮಾಡಲು ಆಗುವುದಿಲ್ಲ. ಅಡಚಣೆಗಾಗಿ ವಿಷಾದಿಸುತ್ತೇವೆ. ಕೆಲ ನಿಮಿಷಗಳ ನಂತರ ಮತ್ತೆ ಇದೇ ಇಲ್ಲಿಗೆ ಬನ್ನಿ’ ಎಂಬ ಸಂದೇಶ ಕಾಣಿಸಿಕೊಳ್ಳುತ್ತಿದೆ.
ಗೂಗಲ್ ಡ್ರೈವ್, ಹ್ಯಾಂಗೌಟ್ಸ್, ಮೀಟ್, ಪ್ಲೇ ಮತ್ತು ಡ್ಯೋ ಸೇರಿದಂತೆ ಹಲವು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿರುವುದನ್ನು ಡೌನ್ಡಿಟೆಕ್ಟರ್ ವೆಬ್ಸೈಟ್ ದೃಢಪಡಿಸಿದೆ. ಡೆಸ್ಕ್ಟಾಪ್ಗಳಲ್ಲಿ ಗೂಗಲ್ ಮ್ಯಾಪ್ಸ್ ಓಪನ್ ಆಗ್ತಿದೆ. ಆದರೆ, ಸೈನ್ಇನ್ ಆಗಿ ಬೇಕಿರುವ ಮಾಹಿತಿ ಹೆಕ್ಕಲು ಸಾಧ್ಯವಾಗುತ್ತಿಲ್ಲ.




