
‘ಹುಟ್ಟುವ ಮಗುವಿನ ತಲೆಗೂ ಋಣಭಾರ ಹೊರಿಸುವ ಬಜೆಟ್’
ಬೆಂಗಳೂರು,ಫೆ.2:- ಹುಟ್ಟುವ ಮಗುವಿನ ತಲೆಗೂ ಋಣಭಾರ ಹೊರಿಸುವ ಬಜೆಟ್ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ ಎಂದು ಆಪ್ ಬೆಂಗಳೂರು ನಗರ ಘಟಕ ಅಧ್ಯಕ್ಷ ಮೋಹನ್ ದಾಸರಿ ವ್ಯಂಗ್ಯವಾಡಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರದ ಜನವಿರೋಧಿ ಬಜೆಟ್ ಹಾಗೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಆಮ್ ಆದ್ಮಿ ಪಕ್ಷದಿಂದ ನಗರದ ಮೌರ್ಯ ವೃತ್ತದಲ್ಲಿ ಬೇಳೆಕಾಳು, ಬ್ರೆಡ್, ಜಾಮ್, ಬೆಣ್ಣೆಯನ್ನು ಮಾರುವ ಮೂಲಕ ವಿನೂತನ ಪ್ರತಿಭಟನೆ ನಡೆಸಿ ಮಾತನಾಡಿದ ಮೋಹನ್ ದಾಸರಿ,ವಿತ್ತೀಯ ಕೊರತೆ ಹೊಂದಿರುವ, ನವಜಾತ ಶಿಶುವಿನ ತಲೆಗೂ ಋಣಭಾರ ಹೊರಿಸುವ, ಜನಸಾಮಾನ್ಯರ ಮೇಲೆ ಕೃಷಿಕರ ಹೆಸರಿನಲ್ಲಿ ಬೇಳೆಕಾಳುಗಳ, ಕಣ್ಣಿಗೆ ಕಂಡ ಎಲ್ಲಾ ವಸ್ತುಗಳ ಮೇಲೆ ಸೆಸ್ ಭಾರ ಹೇರಿದ ನಿರ್ಮಲಾ ಸೀತರಾಮನ್ ಅವರ ಸಾಲದ ಬಜೆಟ್ ಇದಾಗಿದೆ ಎಂದು ಟೀಕಿಸಿದರು.,
ಆರೋಗ್ಯ ಕ್ಷೇತ್ರಕ್ಕೆ 73, 932 ಕೋಟಿ ಹಂಚಿಕೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಹೆಚ್ಚಿನ ಮೊತ್ತ ಎನಿಸಿದರೂ, ಕೊರೋನಾ ಲಸಿಕೆಗಾಗಿ ತೆಗೆದಿರಿಸಿರುವ 35 ಸಾವಿರ ಕೋಟಿ ಕಳೆದರೆ ಏನೇನೂ ಉಳಿಯುವುದಿಲ್ಲ. ಕೊರೋನಾ ಸಂಧರ್ಭದಲ್ಲಿ ನಮ್ಮ ಕೆಟ್ಟ ಆರೋಗ್ಯ ವ್ಯವಸ್ಥೆಯ ಬಗ್ಗೆ ಸರ್ಕಾರಕ್ಕೆ ಅರಿವಾಗಿದ್ದರೆ ಆರೋಗ್ಯ ಕ್ಷೇತ್ರದ ಕಡೆ ಕೊಂಚವಾದರೂ ಗಮನ ಹರಿಸುತ್ತಿತ್ತು ಈಗ ರೋಗಗ್ರಸ್ತ ಭಾರತ ನಿರ್ಮಾಣ ಮಾಡುವಂತಿದೆ ಈ ಬಜೆಟ್ ಎಂದರು.
ಪ್ರತಿಭಟನೆಯಲ್ಲಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಉಪಾಧ್ಯಕ್ಷ ಬಿ.ಟಿ.ನಾಗಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ, ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಎಸ್.ವಿ.ಫಣಿರಾಜ್, ಅಲ್ಪಸಂಖ್ಯಾತರ ಘಟಕದ ಫರೀದ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.




