ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ, ಮರ ಬಿದ್ದು ಮನೆ ಸಂಪೂರ್ಣ ನಾಶ

ಚಿಕ್ಕಮಗಳೂರು, ಮೇ 24: ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ ಮುಂದುವರಿದ್ದು, ಬಿರುಗಾಳಿಗೆ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆ ಕಗ್ಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಾಳೆಹೊಳೆ ಕಗ್ಗನಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ಧಾರಾಕಾರ ಮಳೆಯಾಗಿದ್ದು, ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಮನೆಯೊಂದರ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದೆ.

ಕುಟುಂಬಸ್ಥರು ಮಲಗಿದ್ದ ಮಂಚದ ಮೇಲೆಯೇ ಕೊಂಬೆ ಬಿದ್ದಿದ್ದು, ಮನೆಯಲ್ಲಿದ್ದ ಐವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ಕುಟುಂಬಸ್ಥರು ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಮರಳ ಬೀಳುವ ಸದ್ದು ಕೇಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದು, ಮನೆಯಲ್ಲಿ ಸಿಲುಕಿದ್ದವರನ್ನು ಕೂಡಲೇ ರಕ್ಷಣೆ ಮಾಡಿದ್ದಾರೆ. ಭಾರೀ ಗಾಳಿ ಮಳೆಗೆ ಮನೆ ಮೇಲೆ ಮರ ಬಿದ್ದ ಘಟನೆಯಲ್ಲಿ ಮನೆ ಸಂಪೂರ್ಣ ಜಖಂ ಆಗಿದ್ದು, ಮನೆಯಲ್ಲಿದ್ದ ಪಿಠೋಪಕರಣಗಳಿಗೆ ಬಹುತೇಕ ಹಾನಿಯಾಗಿದೆ. ಮನೆಯಲ್ಲಿ ಸಂಗ್ರಹಿಸಿದ್ದ ಆಹಾರ ಪದಾರ್ಥಗಳು ಮಣ್ಣು ಪಾಲಾಗಿದೆ. ಬೃಹತ್ ಗಾತ್ರದ ಮರ ಬಿದ್ದರೂ ಐವರು ಪ್ರಾಣಾಪಾಯದಿಂದ ಬಚಾವ್‌ ಆಗಿರುವುದು ಪವಾಡ ಎಂದ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Latest Indian news

Popular Stories