ನಾಡಿನ ‘ಮಹಿಳೆ’ಯರಿಗೆ ‘ಭಾವನಾತ್ಮಕ ಪತ್ರ’ ಬರೆದ ‘ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಾಡಿನ ಮಹಿಳೆಯರಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.

ಹದಿನೆಂಟನೇ ಲೋಕಸಭಾ ಚುನಾವಣೆಯಲ್ಲಿ ನಿರ್ಧಾರವಾಗಲಿರುವುದು ರಾಜಕೀಯ ಪಕ್ಷಗಳ ಸೋಲು-ಗೆಲುವುಗಳು ಮಾತ್ರ ಅಲ್ಲ, ಈ ಚುನಾವಣೆ ಮಹಿಳೆಯರ ಪರವಾದ ಸರ್ಕಾರದ ಕಾರ್ಯಕ್ರಮಗಳ ಸೋಲು-ಗೆಲುವನ್ನು ಕೂಡಾ ನಿರ್ಧರಿಸಲಿದೆ.

ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ” ಎಂದು ಖಡಾಖಂಡಿತವಾಗಿ ಸಾರಿದ ಮನುಶಾಸ್ತ್ರವನ್ನು ನಂಬಿರುವ ಭಾರತೀಯ ಜನತಾ ಪಕ್ಷ ಮತ್ತು ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಸ್ಥಾನಮಾನ ನೀಡಬೇಕೆಂದು ಸಾರಿದ ಸಂವಿಧಾನಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷಗಳ ನಡುವೆ ಇಂದಿನ ಮಹಿಳೆಯರು ಆಯ್ಕೆ ಮಾಡಬೇಕಾಗಿದೆ ಎಂದಿದ್ದಾರೆ.

ಭಾರತೀಯ ಜನತಾ ಪಕ್ಷ ಮತ್ತು ಅದರ ಮಾತೃಸಂಸ್ಥೆಯಾದ ಆರ್ ಎಸ್ ಎಸ್ ನ ಸಿದ್ಧಾಂತ ಮತ್ತು ನಡವಳಿಕೆ ಸ್ಪಷ್ಟವಾಗಿ ಮಹಿಳಾ ವಿರೋಧಿಯಾದುದು. ಗುಜರಾತ್ ನಿಂದ ಮಣಿಪುರದ ವರೆಗೆ ಇದಕ್ಕೆ ನಿದರ್ಶನಗಳನ್ನು ಕಾಣಬಹುದು. ಕರ್ನಾಟಕದಲ್ಲಿ ಸ್ತ್ರೀಪೀಡಕರ ಜೊತೆಗೆ ಬಿಜೆಪಿ ಕೈಜೋಡಿಸಿರುವುದು ಇತ್ತೀಚಿನ ಉದಾಹರಣೆ. ಕಾಯಾ ವಾಚಾ ಮನಸಾ ಬಿಜೆಪಿ ಮಹಿಳಾ ವಿರೋಧಿ ಪಕ್ಷ ಎಂದು ತಿಳಿಸಿದ್ದಾರೆ.

ನಮ್ಮ ಸರ್ಕಾರ ”ಗೃಹಲಕ್ಷ್ಮಿ” ಮತ್ತು ”ಶಕ್ತಿ” ಯೋಜನೆಗಳನ್ನು ಶುರುಮಾಡಿದ ದಿನದಿಂದಲೂ ಬಿಜೆಪಿ ನಾಯಕರು ಇದರ ವಿರುದ್ದ ಅಪಪ್ರಚಾರದ ಆಂದೋಲವನ್ನು ಪ್ರಾರಂಭಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗುತ್ತಿದೆ ಎಂದು ಕೆಲವರು ಆರೋಪಿಸಿದರೆ ಇನ್ನು ಕೆಲವರು ಇನ್ನೂ ಮುಂದಕ್ಕೆ ಹೋಗಿ ಈ ರೀತಿಯ ನೆರವು ನೀಡಿದರೆ ಹೆಣ್ಣುಮಕ್ಕಳು ಮನೆಬಿಟ್ಟು ಹಾದಿ ತಪ್ಪುತ್ತಾರೆ ಎಂದು ತೀರಾ ಕ್ಷುಲ್ಲಕತನದ ಆರೋಪ ಮಾಡಿದ್ದಾರೆ ಎಂದಿದ್ದಾರೆ.

ಬಿಜೆಪಿ ನಾಯಕರ ವಿರೋಧಕ್ಕೆ ಮುಖ್ಯ ಕಾರಣ ಮಹಿಳೆಯರ ಸಬಲೀಕರಣವಾಗಬಾರದೆಂಬ ದುಷ್ಟ ಉದ್ದೇಶ. ಮಹಿಳಾ ಸಬಲೀಕರಣವನ್ನು ಕಾಂಗ್ರೆಸ್ ಪಕ್ಷ ಎಂದೂ ರಾಜಕೀಯ ಕಾರ್ಯಕ್ರಮವಾಗಿ ನೋಡಿಲ್ಲ, ಅದು ನಮ್ಮ ಪಾಲಿಗೆ ಸಾಮಾಜಿಕ ಜವಾಬ್ದಾರಿ. ನಮ್ಮ ಪಕ್ಷ ಮತ್ತು ಸರ್ಕಾರ ಮಹಿಳಾ ಪರವಾಗಿ ನಿಂತಿರುವುದಕ್ಕೆ 2013-18ರ ಅವಧಿಯ ನಮ್ಮ ಹಳೆಯ ಸರ್ಕಾರ ಮತ್ತು ಕಳೆದ ಹತ್ತು ತಿಂಗಳ ಅವಧಿಯ ನಮ್ಮ ಹೊಸ ಸರ್ಕಾರದ ಸಾಧನೆಗಳು ಸಾಕ್ಷಿ ಎಂದು ಹೇಳಿದ್ದಾರೆ.

Latest Indian news

Popular Stories