Crime

ಪೌರ ಕಾರ್ಮಿಕರ ದಿನಾಚರಣೆ: ಪೌರ ಕಾರ್ಮಿಕರ ಸೇವೆ ಅನನ್ಯ: ಡಾ. ಶಿವರಾಜ ಪಾಟೀಲ್

ರಾಯಚೂರು,ಸೆ.29:- ಕೋವಿಡ್-19 ಸೋಂಕಿನ ಸಂದರ್ಭದಲ್ಲೂ ನಗರದ ಸ್ಪಚ್ಚತೆಗೆ ಶ್ರಮಿಸಿದ ಪೌರ ಕಾರ್ಮಿಕರ ಸೇವೆ ಅನನ್ಯವಾದದು ಎಂದು ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ. ಶಿವರಾಜ ಪಾಟೀಲ್ ಅವರು ಹೇಳಿದರು.
ಅವರು ಸೆ.29ರ ಮಂಗಳವಾರ ನಗರದ ಅತ್ತನೂರು ಫಂಕ್ಷನ್ ಹಾಲ್‍ನಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೋವಿಡ್-19 ಸಂಕಷ್ಟದಲ್ಲಿ ತಂದೆ ತಾಯಿ, ಸಂಬಂಧಿಗಳನ್ನು ಮುಟ್ಟಲು ಆಗದೇ ಇರುವ ಸಂದರ್ಭದಲ್ಲಿ ಪೌರ ಕಾರ್ಮಿಕರು ನಗರದ ಸ್ಪಚ್ಚತೆಯೊಂದಿಗೆ ಮನೆ ಮನೆಗೆ ತೆರಳಿ ಜನರಿಗೆ ಒದಗಿಸಿರುವ ಸೇವೆ ದೊಡ್ಡದಿದೆ. ಪೌರ ಕಾರ್ಮಿಕರ ಸಮಸ್ಯೆಗಳನ್ನು ಬಗೆ ಹರಿಸಲು ಜಿಲ್ಲಾಧಿಕಾರಿಗಳು, ಪೌರ ಕಾರ್ಮಿಕರ ಸಂಘಟನೆಗಳೊಂದಿಗೆ ಚರ್ಚಿಸಲಾಗಿದೆ. ಪೌರಕಾರ್ಮಿಕರಿಗೆ ಮನೆಗಳನ್ನು ಒದಗಿಸಲು ಸರ್ಕಾರದ ಮಟ್ಟದಲ್ಲಿ ಮೂರು ಸಾವಿರ ಮನೆಗಳ ಮಂಜೂರಾತಿ ಪ್ರಸ್ತಾವನೆಯಿದೆ. ಮಂಜೂರಿಯಾದ ನಂತರ ಆದ್ಯತೆ ಮೇರೆಗೆ ಮನೆಗಳನ್ನು ಒದಗಿಸಲಾಗುವುದು ಎಂದರು.
ಶೇ.22.75 ಸೇರಿದಂತೆ ಇತರೆ ಅನುದಾನದಲ್ಲಿ ಪೌರ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ಒದಗಿಸಲು ಕ್ರಮಕೈಗೊಳ್ಳಲಾಗುವುದು, ಪೌರ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಸೇರಿದಂತೆ ಅವರ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು ಮಾತನಾಡಿ, ಪೌರ ಕಾರ್ಮಿಕರು ಕೊರೋನಾ ಹಾಗೂ ಮಳೆಯ ನೀರಿನಿಂದ ಎದುರಾಗಿದ್ದ ಸಮ್ಸಸ್ಯೆ ನಿವಾರಿಸಲು ನಿರ್ವಹಿಸಿದ ಸೇವೆ ಅಪಾರವಾದದ್ದು. ಕೊರೋನಾ ಪ್ರಾರಂಭದಲ್ಲಿ ಚಿಕಿತ್ಸೆ, ಸೋಂಕಿತರ ಪತ್ತೆ ಮಾಡಿ ಚಿಕಿತ್ಸೆ ಒದಗಿಸಲು ಪೌರ ಕಾರ್ಮಿಕರು ದೊಡ್ಡ ಸಹಾಯವನ್ನು ಮಾಡಿದ್ದಾರೆ. ಅದೇ ರೀತಿ ನಗರದಲ್ಲಿ ಮಳೆಯಿಂದ ಆಗಿರುವ ಅನಾಹುತ ತಪ್ಪಿಸಲು ಸಹ ಪೌರ ಕಾರ್ಮಿಕರು ಶ್ರಮಿಸಿದ್ದಾರೆ. ಪೌರ ಕಾರ್ಮಿಕರ ಸಮಸ್ಯೆಗಳ ನಿವಾರಣೆಗೆ ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಆರ್‍ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ನಗರಸಭೆ ಪೌರಾಯುಕ್ತ ಡಾ.ದೇವಾನಂದ ದೊಡ್ಡಮನಿ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಹಂಪಯ್ಯ ಪಾಟೀಲ್, ಮಲ್ಲೇಶ, ನಗರಸಭೆ ಎಇಇ ಶಫಿ, ಶಫಿಯುದ್ದೀನ್, ಜೈಪಾಲರೆಡ್ಡಿ ಹಾಗೂ ಪೌರ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button