ಡಿವೈಎಸ್​ಪಿ ಆನ್ ಲೈನ್ ವಂಚಕರ ಬಲೆಗೆ | ರೂ. 15,98,761. ಕನ್ನ

ಆನ್ ಲೈನ್ ಖದೀಮರು ಡಿವೈಎಸ್​ಪಿ (DySP) ವೊಬ್ಬರ ಎರಡು ಬ್ಯಾಂಕ್​ ಖಾತೆಗಳಿಗೆ ಕನ್ನ ಹಾಕಿ ಅವರ ಅರಿವಿಗೆ ಬಾರದಂತೆ 15,98,761 ರೂ. ಗಳನ್ನು ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಘಟನೆ ವರದಿಯಾಗಿದೆ. ಇಂತಹ ದಗಾಕೋರತನವನ್ನು ಮಟ್ಟ ಹಾಕಬೇಕಾಗಿದ್ದ ಪೊಲೀಸ್ ಅಧಿಕಾರಿಯೇ ಜನಸಾಮಾನ್ಯರಂತೆ ವಂಚಕರಿಂದ ಚಳ್ಳೆಹಣ್ಣು ತಿಂದಿದ್ದಾರೆ.

ಈ ವಂಚನೆ ಪ್ರಕರಣ ಹಾಸನದಲ್ಲಿ ನಡೆದಿದ್ದು, ಕೊಡಗಿನ ಎರಡು ಪ್ರಮುಖ ಬ್ಯಾಂಕ್ ಗಳಲ್ಲಿದ್ದ ಇವರ ಹಣವನ್ನು ಎಗರಿಸಲಾಗಿದೆ.

ಹಾಸನ ಉಪವಿಭಾಗದ ಡಿವೈಎಸ್​ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಕೆ. ಮುರಳೀಧರ್ ಅವರೇ ಲಕ್ಷಾಂತರ ರೂ. ವನ್ನು ಕಳೆದುಕೊಂಡು ಸ್ವತಃ ದೂರಿನೊಂದಿಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದವರಾಗಿದ್ದಾರೆ.

ಡಿವೈಎಸ್​ಪಿ ಪಿ.ಕೆ.ಮುರಳೀಧರ್ ಅವರು ಮಡಿಕೇರಿಯ ಕೆನರಾ ಬ್ಯಾಂಕ್ ನ ಮೈನ್ ಬ್ರ್ಯಾಂಚ್ ನಲ್ಲಿ ಮತ್ತು ಭಾಗಮಂಡಲದ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಮೇ. 20 ರಂದು ಮಧ್ಯಾಹ್ನ 1.30ರ ಸಮಯದಲ್ಲಿ ಇವರ ಫೋನ್​ಗೆ ಬಂದ ಮೆಸೇಜ್‌ಗಳನ್ನು ನೋಡಿ ಹೌಹಾರಿದ್ದಾರೆ. ಆ ಮೆಸೇಜ್‌ಗಳ ಮೂಲಕ ಖದೀಮರ ಕೈಚಳಕ ಬೆಳಕಿಗೆ ಬಂದಿದೆ. ಡಿವೈಎಸ್‌ಪಿ ಅವರ ಗಮನಕ್ಕೆ ಬಾರದೆ ಈ ಎರಡೂ ಖಾತೆಗಳಿಂದ ಖತರ್ನಾಕ್ ಚೋರರ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ.

ಕೆನರಾ ಬ್ಯಾಂಕ್ ಮಡಿಕೇರಿ ಮೈನ್ ಬ್ರ್ಯಾಂಚ್ ನ ಖಾತೆಯಿಂದ ಬೆಳಗ್ಗೆ 10.29 ಗಂಟೆಯಿಂದ ಮಧ್ಯಾಹ್ನ 1.30 ಗಂಟೆವರೆಗೆ ಒಟ್ಟು 25 ವರ್ಗಾವಣೆಗಳ ಮೂಲಕ ಒಟ್ಟು 12,12,711 ರೂ. ಗಳಿಗೆ ಕನ್ನ ಹಾಕಲಾಗಿದೆ.

ಭಾಗಮಂಡಲ ಕೆನರಾಬ್ಯಾಂಕ್ ಶಾಖೆ ಖಾತೆಯಿಂದ ಬೆಳಿಗ್ಗೆ 10.28 ಗಂಟೆಯಿಂದ ಮಧ್ಯಾಹ್ನ 12.56 ಗಂಟೆವರೆಗೆ ಒಟ್ಟು 10 ವರ್ಗಾವಣೆ ಮೂಲಕ ಒಟ್ಟು 3,88,050 ರೂ. ಗಳನ್ನು ಮಂಗಮಾಯ ಮಾಡಲಾಗಿದೆ.

ಈ ಎರಡು ಕೆನರಾ ಬ್ಯಾಂಕ್ ಖಾತೆಗಳಿಂದ ಒಟ್ಟು 15,98,761 ರೂ. ವನ್ನು ವಂಚಕರು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಾಸನದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿರುವ ಡಿವೈಎಸ್​ಪಿ ಪಿ.ಕೆ. ಮುರಳೀಧರ್ ಅವರು ಆನ್ ಲೈನ್ ಖದೀಮರನ್ನು ಪತ್ತೆ ಮಾಡಿ ಹಣ ವಾಪಸ್ ಕೊಡಿಸುವಂತೆ ಕೇಳಿಕೊಂಡಿದ್ದಾರೆ.

Latest Indian news

Popular Stories