ಬಿಜೆಪಿಯಿಂದ ಚುನಾವಣಾ ನೀತಿ ಉಲ್ಲಂಘನೆ : ಕೊಡಗು ಕಾಂಗ್ರೆಸ್ ಆರೋಪ

ಮಡಿಕೇರಿ ಜ.9 : ಇತ್ತೀಚೆಗೆ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಆಯೋಗವನ್ನೇ ನಿಯಂತ್ರಣಕ್ಕೆ ತೆಗೆದುಕೊಳ್ಳುವಷ್ಟು ಅತಿರೇಕದ ವರ್ತನೆಯನ್ನು ಪ್ರದರ್ಶಿಸಿ, ತನಗೆ ಬೇಕಾದ ರೀತಿಯಲ್ಲಿ ಫಲಿತಾಂಶ ಬರುವಂತೆ ನೋಡಿಕೊಂಡಿದೆÀ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಎಣಿಕೆ ಮತ್ತು ಮರು ಎಣಿಕೆ ಎಂಬ ಎರಡು ಅವಕಾಶಗಳು ಮಾತ್ರ ಇದೆ. ಆದರೆ, ಜಿಲ್ಲೆಯಲ್ಲಿ ಬಿಜೆಪಿ ಮಂದಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ನಾಲ್ಕರಿಂದ ಐದು ಬಾರಿ ಮತ ಎಣಿಕೆ ಮಾಡಿಸಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಸೋಲುವಂತೆ ಮಾಡಿದ್ದಾರೆ. ಶಾಸಕರೊಬ್ಬರು ಬಲವಂತವಾಗಿ ಹಿಂಬಾಲಕರೊಂದಿಗೆ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.
ತಿತಿಮತಿ ಪಂಚಾಯ್ತಿಯ ನೋಕ್ಯ ಗ್ರಾಮದ ವಾರ್ಡ್ ಸಂಖ್ಯೆ 4 ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಂಜಿ ಅವರು ಮೊದಲ ಸುತ್ತಿನಲ್ಲಿ ಸಮಬಲವನ್ನು ಪಡೆದು, ಮರು ಎಣಿಕೆ ಸಂದರ್ಭ 1 ಮತದ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಫಲಿತಾಂಶವನ್ನು ಅಧಿಕಾರಿಗಳು ಅಧಿಕೃತವಾಗಿ ಘೋಷಿಸಿದ್ದರು. ಆದರೆ, ಬಿಜೆಪಿಯವರ ಒತ್ತಡದಿಂದಾಗಿ 3ನೇ ಸುತ್ತಿನ ಮತ ಎಣಿಕೆ ನಡೆಸಿ ಕುಲಗೆಟ್ಟ ಮತಗಳೆಂದು ಲೆಕ್ಕ ತೋರಿಸಿ ರಂಜಿ ಸೋಲುವಂತೆ ಮಾಡಿದ್ದಾರೆ. ಇದು ಕಾನೂನು ಬಾಹಿರ ಮತ ಎಣಿಕಾ ಕಾರ್ಯವಾಗಿದ್ದು, ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಮಂಜುನಾಥ್ ಕುಮಾರ್ ಒತ್ತಾಯಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ನ್ಯಾಯಾಲಯದ ಕದ ತಟ್ಟಿರುವುದಾಗಿ ತಿಳಿಸಿದರು.
ನೈಜವಾಗಿ ಚುನಾವಣಾ ಫಲಿತಾಂಶವನ್ನು ಅವಲೋಕಿಸಿದರೆ ಜಿಲ್ಲೆಯಲ್ಲಿ ಬಿಜೆಪಿ 613 ಹಾಗೂ ಕಾಂಗ್ರೆಸ್, ಜೆಡಿಎಸ್, ಪಕ್ಷೇತರರು ಸೇರಿ 540 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಕಾಂಗ್ರೆಸ್ ಏಕಾಂಗಿಯಾಗಿ 402 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಬಂಡಾಯ ಅಭ್ಯರ್ಥಿಗಳನ್ನು ಹೊರತು ಪಡಿಸಿದರೆ, ಸುಮಾರು 500 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದ್ದರಿಂದ ಬಜೆಪಿಗೆ ದೊಡ್ಡ ಮಟ್ಟದ ಗೆಲುವು ಲಭಿಸಿಲ್ಲವೆಂದು ಮಂಜುನಾಥ್ ಕುಮಾರ್ ಸಮರ್ಥಿಸಿಕೊಂಡರು.
ಸೋಮವಾರಪೇಟೆ ಬ್ಲಾಕ್‍ನಲ್ಲಿ ಕಾಂಗ್ರೆಸ್ 41, ಬಿಜೆಪಿ 43, ಆರು ಗ್ರಾಮ ಪಂಚಾಯ್ತಿಗಳಲ್ಲಿ ಕಾಂಗ್ರೆಸ್‍ಗೆ ಅಧಿಕಾರ, ಮಡಿಕೆÉೀರಿ ಬ್ಲಾಕ್‍ನಲ್ಲಿ ಕಾಂಗ್ರೆಸ್ 28, ಬಿಜೆಪಿ 103, ಎರಡು ಪಂಚಾಯ್ತಿಗಳಲ್ಲಿ ಕಾಂಗ್ರೆಸ್ ಮೇಲುಗೈ, ಕುಶಾಲನಗರ ಬ್ಲಾಕ್‍ನಲ್ಲಿ ಕಾಂಗ್ರೆಸ್ 110, ಬಿಜೆಪಿ 95, ಹದಿನಾಲ್ಕು ಪಂಚಾಯ್ತಿಗಳಲ್ಲಿ ಕಾಂಗ್ರೆಸ್‍ಗೆ ಅಧಿಕಾರ ದೊರೆಯಲಿದೆ ಎಂದರು. ವಿರಾಜಪೇಟೆ ಬ್ಲಾಕ್‍ನಲ್ಲಿ ಕಾಂಗ್ರೆಸ್ 87, ಬಿಜೆಪಿ 102, ಆರು ಪಂಚಾಯ್ತಿಗಳಲ್ಲಿ ಕಾಂಗ್ರೆಸ್‍ಗೆ ಅಧಿಕಾರ, ಪೊನ್ನಂಪೇಟೆ ಬ್ಲಾಕ್‍ನಲ್ಲಿ ಕಾಂಗ್ರೆಸ್ 60, ಬಿಜೆಪಿ 127, ಒಂದು ಪಂಚಾಯ್ತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ, ನಾಪೋಕ್ಲು ಬ್ಲಾಕ್‍ನಲ್ಲಿ ಕಾಂಗ್ರೆಸ್ 76, ಬಿಜೆಪಿ 103, ಎಂಟು ಗ್ರಾಮ ಪಂಚಾಯ್ತಿಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದರು.
ಮಡಿಕೆÉೀರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 179, ಬಿಜೆಪಿ 281 ಸ್ಥಾನ ಪಡೆದಿದ್ದು, 22 ಪಂಚಾಯ್ತಿಗಳಲ್ಲಿ ಕಾಂಗ್ರೆಸ್ ಅಧಿಕಾರ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 223 ಕಾಂಗ್ರೆಸ್, ಬಿಜೆಪಿ 332, ಹದಿನೈದು ಪಂಚಾಯ್ತಿಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಮಾಹಿತಿ ನೀಡಿದರು.
::: ಬೆಳೆ ಪರಿಹಾರಕ್ಕೆ ಒತ್ತಾಯ :::
ಅಕಾಲಿಕ ಮಳೆಯಿಂದ ಕೊಡಗಿನ ರೈತರು ಹಾಗೂ ಬೆಳೆಗಾರರು ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದ್ದು, ಬೆಳೆÉ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಜ.11 ರಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದೆಂದು ಮಂಜುನಾಥ್ ಕುಮಾರ್ ತಿಳಿಸಿದರು.
ಕಳೆದ ಮೂರು ವರ್ಷಗಳಿದ ಪ್ರಾಕೃತಿಕ ವಿಕೋಪಗಳಿಂದ ಕೊಡಗಿನ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ವರ್ಷ ಕೋವಿಡ್ ಪರಿಸ್ಥಿತಿಯಿಂದ ನಷ್ಟ ಎದುರಾಗಿದೆ. 2021ರಲ್ಲಿ ಆಶಾದಾಯಕ ಬೆಳವಣಿಗೆಗಳು ಇರಬಹುದೆಂದು ಭಾವಿಸಲಾಗಿತ್ತಾದರು, ಆರಂಭದಲ್ಲೆ ಅಕಾಲಿಕ ಮಳೆ ಸುರಿದು ಕಾಫಿ, ಭತ್ತ, ಏಲಕ್ಕಿ, ಅಡಿಕೆ ಸಂಪೂರ್ಣ ನಾಶವಾಗಿದೆ. ಗಿಡದಲ್ಲಿರುವ ಕಾಫಿ ಕೊಳೆಯುತ್ತಿದ್ದರೆ, ಒಣಗಲು ಹಾಕಿದ ಫಸಲು ಅತಿಯಾದ ಮಳೆಗೆ ಕೊಚ್ಚಿಹೋಗಿದೆ. ಕೊಯ್ಲಿಗೆ ಬಂದಿದ್ದ ಭತ್ತ ನೀರು ಪಾಲಾಗಿದೆ.
ಇಷ್ಟೆಲ್ಲ ಕಷ್ಟ ನಷ್ಟಗಳ ನಡುವೆ ಜಿಲ್ಲೆಯ ಕೃಷಿಕ ವರ್ಗ ಭವಣೆ ಅನುಭವಿಸುತ್ತಿದ್ದರು ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಸಂಸದರು ಹಾಗೂ ಶಾಸಕರು ಯಾವುದೇ ಪರಿಹಾರೋಪಾಯಗಳನ್ನು ಸೂಚಿಸುತ್ತಿಲ್ಲ. ಜಿಲ್ಲೆಯ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತರುತ್ತಿಲ್ಲ. ಸಂಸದರು ಬಾಯಿಗೆ ಬೀಗ ಹಾಕಿಕೊಂಡು ಕುಳಿತ್ತಿದ್ದಾರೆ. ಚುನಾವಣೆ ಸಂದರ್ಭ ಮಾತ್ರ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಮಂಜುನಾಥ್ ಕುಮಾರ್ ಟೀಕಿಸಿದರು.
::: ಕಾಂಗ್ರೆಸ್‍ಗೆ ವಲಸೆ ಬರುತ್ತಿದ್ದಾರೆ :::
ಕಾಂಗ್ರೆಸ್ ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಜುನಾಥ್ ಕುಮಾರ್, ಎರಡು ಮೂರು ಮಂದಿ ರಾಜೀನಾಮೆ ನೀಡಿರಬಹುದು. ಆದರೆ, ಬಿಜೆಪಿ ಮತ್ತು ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ವಲಸೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆಯೆಂದು ಸಮರ್ಥಿಸಿಕೊಂಡರು. ಬಿಜೆಪಿಯಿಂದಲು ಸಾಕಷ್ಟು ಮಂದಿ ರಾಜೀನಾಮೆ ನೀಡಿ ಹೊರ ಹೋಗುತ್ತಿದ್ದಾರೆ, ಆ ಪಕ್ಷದಂತೆ ಕಾಂಗ್ರೆಸ್ ಕ್ಷುಲ್ಲಕ ರಾಜಕಾರಣ ಮಾಡುವುದಿಲ್ಲವೆಂದು ತಿಳಿಸಿದರು.
ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ ಅವರ ಅಧಿಕಾರದ ಅವಧಿ ಪೂರ್ಣಗೊಂಡಿರುವುದರಿಂದ ಹೊಸಬ್ಬರಿಗೆ ಅವಕಾಶ ಕಲ್ಪಿಸಿಕೊಡುವುದಕ್ಕಾಗಿ ತಮ್ಮ ಸ್ಥಾನವನ್ನು ಬಿಟ್ಟು ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ವಕ್ತಾರ ಟಿ.ಈ.ಸುರೇಶ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್, ಜಿಲ್ಲಾ ಕಾಂಗ್ರೆಸ್ ವಿಶೇಷ ಆಹ್ವಾನಿತ ಉದಯ ಕುಮಾರ್, ನಗರ ಯುವ ಘಟಕದ ಅಧ್ಯಕ್ಷ ಸದಾ ಮುದ್ದಪ್ಪ ಹಾಗೂ ನಗರ ಮಹಿಳಾ ಘಟಕದ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ ಉಪಸ್ಥಿತರಿದ್ದರು.

Latest Indian news

Popular Stories