ಬೆಂಗಳೂರು, ಜ.2 (ಯುಎನ್‍ಐ):- ರಾಜ್ಯದ ರೈತರು ಹಾಗೂ ಪ್ರತಿಪಕ್ಷಗಳ ವಿರೋಧದ ಮಧ್ಯೆ ಅಂಗೀಕಾರಗೊಂಡಿದ್ದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಅಧಿನಿಯಮ-2020’ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು ಕರ್ನಾಟಕ ರಾಜ್ಯಪತ್ರ ಪ್ರಕಟಿಸಲಾಗಿದೆ.
1966ರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಾಡಿದ್ದು, ಎಪಿಎಂಸಿ ಪ್ರಾಂಗಣ ಮತ್ತು ಉಪ ಮಾರುಕಟ್ಟೆ ಪ್ರಾಂಗಣಗಳಲ್ಲಿ ಅಧಿಸೂಚಿತ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣಕ್ಕೆ ಕಾಯ್ದೆ ರೂಪಿಸಲಾಗಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಕೃಷಿ ಉತ್ಪನ್ನಗಳ ಮಾರಾಟಕ್ಕೆ ತೊಂದರೆಯಾಗಲಿದೆ. ಮಾರುಕಟ್ಟೆಗೆ ಖಾಸಗಿ ಕಂಪೆನಿಗಳು ಲಗ್ಗೆಯಿಡುವುದರಿಂದ ರೈತರಿಗೆ ನಷ್ಟವಾಗಲಿದೆ ಎಂದು ಆರೋಪಿಸಲಾಗಿತ್ತು.
ವರ್ತಕರು ನೇರವಾಗಿ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಕಲ್ಪಿಸಲು ಮತ್ತು ಎಪಿಎಂಸಿ ಪ್ರಾಂಗಣಗಳ ಹೊರಗೆ ನಡೆಯುವ ಕೃಷಿ ಉತ್ಪನ್ನಗಳ ಮಾರಾಟದ ಮೇಲೆ ಸೆಸ್ ವಿಧಿಸುವುದನ್ನು ರದ್ದುಗೊಳಿಸುವ ತಿದ್ದುಪಡಿಯನ್ನು ಈ ಕಾಯ್ದೆಯಲ್ಲಿ ಸೇರಿಸಲಾಗಿದೆ.