
ಅತ್ತೆಯನ್ನು ಸೋಲಿಸಿದ ಸೊಸೆ !
ಬೀದರ್,ಡಿ.30:- ಮನೆಯೊಳಗಿನ ಅತ್ತೆ ಸೊಸೆ ಜಗಳದಲ್ಲಿ ಯಾರು ಗೆಲ್ಲಬಹುದು ಎನ್ನುವುದನ್ನು ಹೇಳುವುದು ಕಷ್ಟ. ಒಮ್ಮೆ ಅತ್ತೆ ಗೆದ್ದರೆ, ಮತ್ತೊಮ್ಮೆ ಸೊಸೆ ಕೈ ಮೇಲಾಗಬಹುದು. ಗ್ರಾಮ ಪಂಚಾಯತಿ ಚುನಾವಣೆಯಲ್ಲೂ ಇಂತಹದೇ ಫಲಿತಾಂಶ ಬಂದಿದೆ. ಒಂದು ವಾರ್ಡ್ನಲ್ಲಿ ಸೊಸೆ ಗೆದ್ದರೆ, ಮತ್ತೊಂದು ವಾರ್ಡ್ನಲ್ಲಿ ಅತ್ತೆ ಗೆದ್ದಿದ್ದಾರೆ. ಅತ್ತೆ ಸೊಸೆಯರ ಪಂಚಾಯತಿ ಫೈಟ್ ನಡೆದಿದ್ದು ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಡಿಗ್ಗಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ.
ಡಿಗ್ಗಿ ಗ್ರಾಮ ಪಂಚಾಯತಿ ಚುನಾವಣೆಯ ಸಾಮಾನ್ಯ ಕ್ಷೇತ್ರದಲ್ಲಿ ಸೊಸೆ ಸುಗುಣಾವತಿ ಕಾಶಿನಾಥ ಬಿರಾದಾರ್ ಮತ್ತು ಅತ್ತೆ ಮೀನಾಕ್ಷಿ ಮಡಿವಾಳಪ್ಪ ಬಿರಾದಾರ್ ಪ್ರತಿಸ್ಪರ್ಧಿಯಾಗಿದ್ದರು. ಬುಧವಾರ ನಡೆದ ಮತ ಎಣಿಕೆಯಲ್ಲಿ ಸೊಸೆ ಸುಗುಣಾವತಿ 548 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಆದರೆ, ಅತ್ತೆ ಮೀನಾಕ್ಷಿಗೆ ಸಿಕ್ಕಿದ್ದು ಮಾತ್ರ ಬರೀ 115 ಮತಗಳು. ಕಣದಲ್ಲಿದ್ದ ಮತ್ತೊಬ್ಬ ಅಭ್ಯರ್ಥಿ ಶಿಲ್ಪಾ ಸಂತೋಷ 164 ಮತ ಪಡೆದಿದ್ದಾರೆ.
ಇದೇ ಗ್ರಾಮದ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಲ್ಲೂ ಮತದಾರರು ಅತ್ತೆಯನ್ನು ಗೆಲ್ಲಿಸಿದ್ದಾರೆ. ಸುಶೀಲಾಬಾಯಿ ಭರತ ಅವರು 391 ಮತಗಳನ್ನು ಪಡೆದು ತನ್ನ ಸೊಸೆ ಅನಿತಾ ಮನೋಹರ (304 ಮತ) ಅವರನ್ನು ಪರಾಭವಗೊಳಿಸಿದ್ದಾರೆ.
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲೂ ಸಹೋದರ ಸಂಬಂಧಿಗಳೇ ಪ್ರತಿಸ್ಪರ್ಧಿ ಆಗಿದ್ದು ಈ ಗ್ರಾಮ ಪಂಚಾಯತಿ ಚುನಾವಣೆಯ ವಿಶೇಷ. ಮಿಥುನ್ ಶಿವಾಜಿ 403 ಮತ ಪಡೆದು ಗೆದ್ದಿದ್ದಾರೆ. ಅವರ ಸಹೋದರ ಸಂಬಂಧಿ ಬಾಲಾಜಿ ಪಾಂಡುರಂಗ ಸೋತಿದ್ದಾರೆ.
ಸಂಬಂಧಿಗಳ ನಡುವೆಯೇ ಪಂಚಾಯತಿ ಫೈಟ್ ನಡೆದಿದ್ದು ಡಿಗ್ಗಿ ಗ್ರಾಮ ಪಂಚಾಯತಿ ಚುನಾವಣೆಯ ವಿಶೇಷ.




