ಇರಾನ್ ಅಧ್ಯಕ್ಷರ ಪ್ರಮಾಣವಚನ ಸ್ವೀಕಾರ, ಆಹ್ವಾನ ಸ್ವೀಕರಿಸಿದ ಭಾರತ

ಇರಾನ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಇಬ್ರಾಹಿಂ ರೈಸಿ ಅವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಭಾರತಕ್ಕೆ ಆಹ್ವಾನ ನೀಡಲಾಗಿದೆ. ಭಾರತ ಈ ಆಹ್ವಾನವನ್ನು ಸ್ವೀಕರಿಸಿದೆ. ಆದರೆ, ಪ್ರಮಾಣವಚನ ಸಮಾರಂಭದಲ್ಲಿ ಭಾರತದ ಪರವಾಗಿ ಯಾರು ಪಾಲ್ಗೊಳ್ಳುವರು ಎನ್ನುವುದು ಇನ್ನೂ ಅಂತಿಮಗೊಂಡಿಲ್ಲ.


ಇರಾನ್ ನೂತನ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ ಅವರ ನಡುವೆ ಬುಧವಾರ ತೆಹರನ್‌ನಲ್ಲಿ ನಡೆದ ಭೇಟಿ ವೇಳೆ ಈ ಅಧಿಕೃತ ಆಹ್ವಾನ ನೀಡಲಾಯಿತು.
ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಆಪ್ತರಾಗಿರುವ ಇಬ್ರಾಹಿಂ ರೈಸಿ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ. ೬೧.೯೫ ರಷ್ಟು ಮತಗಳನ್ನು ಪಡೆದು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಆಯ್ಕೆಯ ನಂತರ ರೈಸಿ ಅವರನ್ನು ಭೇಟಿಯಾದ ಮೊದಲ ವಿದೇಶಿ ಗಣ್ಯರು ಎಸ್. ಜೈಶಂಕರ್. ಭೇಟಿ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಪತ್ರವನ್ನು ಸಚಿವ ಜೈ ಶಂಕರ್ ಅವರು ಇರಾನ್ ಅಧ್ಯಕ್ಷರಿಗೆ ನೀಡಿ, ಅಭಿನಂದಿಸಿದರು.
ಪ್ರಧಾನಿ ಮೋದಿ ಅವರ ಕೈ ಬರಹದ ಪತ್ರದಲ್ಲಿ ಕೋವಿಡ್ ಸಾಂಕ್ರಾಮಿಕ ಪಿಡುಗು ಕೊನೆಗೊಂಡ ನಂತರ ಭಾರತಕ್ಕೆ ಭೇಟಿ ನೀಡುವಂತೆ ಇರಾನ್‌ನ ನೂತನ ಅಧ್ಯಕ್ಷರನ್ನು ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಧ್ಯಕ್ಷರಾಗಿ ಚುನಾಯಿತರಾದ ಇಬ್ರಾಹಿಂ ರೈಸಿ ಅವರಿಗೆ ಅಭಿನಂದನೆಗಳು. ಪ್ರದಾನಿ ನರೇಂದ್ರ ಮೋದಿ ಅವರ ವೈಯುಕ್ತಿಕ ಸಂದೇಶವನ್ನು ಇರಾನ್ ಅಧ್ಯಕ್ಷರಿಗೆ ತಲುಪಿಸಲಾಗಿದೆ. ಮುಂದಿನ ದಿನಗಳಲ್ಲಿ ಭಾರತ ಮತ್ತು ಇರಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳು ಇನ್ನಷ್ಟು ಬಲಗೊಳ್ಳಲಿವೆ. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳಲ್ಲಿ ಪರಸ್ಪರ ಸಹಕಾರ ಹೆಚ್ಚುವ ವಿಶ್ವಾಸ ಇದೆ ಎಂದು ಸಚಿವ ಜೈಶಂಕರ್ ಅವರು ಟ್ವೀಟ್ ಮಾಡಿದ್ದಾರೆ. ಇರಾನ್ ಅಧ್ಯಕ್ಷರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಲ್ಪಟ್ಟ ಕೆಲವೇ ದೇಶಗಳಲ್ಲಿ ಭಾರತವೂ ಸೇರಿದೆ. ಆದರೆ, ಭಾರತದ ಪರವಾಗಿ ಈ ಸಮಾರಂಭದಲ್ಲಿ ಯಾರು ಪಾಲ್ಗೊಳ್ಳುತ್ತಾರೆ ಎನ್ನುವುದು ಇನ್ನೂ ಅಂತಿಮಗೊಂಡಿಲ್ಲ. ಇರಾನ್ ಅಧ್ಯಕ್ಷರಾಗಿ ಚುನಾಯಿತರಾದ ಅಯತೊಲ್ಲಾ ಸೆಯ್ಯದ್ ಇಬ್ರಾಹಿಂ ಅವರಿಗೆೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಲಿಖಿತ ಅಭಿನಂದನಾ ಸಂದೇಶವನ್ನು ನೀಡಲು ಇರಾನ್‌ನಲ್ಲಿರುವ ಭಾರತೀಯ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರು ವಿದೇಶಾಂಗ ಸಚಿವ ಮೊಹಮ್ಮದ್ ಜಾವದ್ ಜರೀಫ್ ಅವರನ್ನು ಬುಧವಾರ ಮಧ್ಯಾಹ್ನ ಭೇಟಿಯಾದರು’ ಎಂದು ಇರಾನಿನ ವಿದೇಶಾಂಗ ಸಚಿವಾಲಯ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.
ಗುರುವಾರ ಈ ಕುರಿತು ಪ್ರಕಟಣೆ ಹೊರಡಿಸಿರುವ ಎಂಇಎ ವಕ್ತಾರ ಅರಿಂದಮ್ ಬಾಗ್ಚಿ, ರಷ್ಯಾಕ್ಕೆ ತೆರಳುವ ಮಾರ್ಗದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಟೆಹರನ್‌ನಲ್ಲಿ ಇರಾನ್‌ನ ನೂತನ ಅದ್ಯಕ್ಷರಾಗಿ ಆಯ್ಕೆಯಾಗಿರುವ ಅಯತೊಲ್ಲಾ ಸಯ್ಯಿದ್ ಇಬ್ರಾಹಿಂ ರೈಸಿಯನ್ನು ಭೇಟಿ ಮಾಡಿ ಅಭಿನಂದಿಸಿದರು. ಜೊತೆಗೆ ವಿದೇಶಾಂಗ ಸಚಿವ ಡಾ.ಜಾವದ್ ಜರೀಫ್ ಅವರೊಂದಿಗೆ ಸಭೆ ನಡೆಸಿದರು’ ಎಂದು ತಿಳಿಸಿದ್ದಾರೆ. ಮಾತುಕತೆ ವೇಳೆ ದ್ವಿಪಕ್ಷೀಯ ಸಂಬಂಧ, ಅಫ್ಘಾನಿಸ್ತಾನದ ಪರಿಸ್ಥಿತಿ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು’ ಎಂದು ಇರಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಜೈಶಂಕರ್ ಅವರು ಭಾರತದ ಹಿತಾಸಕ್ತಿಗಳನ್ನು ಪುನರುಚ್ಚರಿಸಿದರು. ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡುವ ಪ್ರಯತ್ನಗಳಿಗೆ ಬೆಂಬಲ ನೀಡಿದರು. ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಎರಡೂ ದೇಶಗಳ ವಿದೇಶಾಂಗ ಸಚಿವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಅಫ್ಘಾನಿಸ್ತಾನದಲ್ಲಿ ವಿಕಾಸಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆಯೂ ಅವರು ಚರ್ಚಿಸಿದರು ಮತ್ತು ಅಲ್ಲಿ ಭದ್ರತೆಯು ಹದಗೆಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅಂತರರಾಷ್ಟ್ರೀಯ ಉತ್ತರ ದಕ್ಷಿಣ ಸಾರಿಗೆ ಕಾರಿಡಾರ್ (ಐಎನ್‌ಎಸ್‌ಟಿಸಿ) ಮತ್ತು ಚಬಹಾರ್ ಬಂದರು ಸೇರಿದಂತೆ ಈ ಪ್ರದೇಶದ ಜಂಟಿ ಸಂಪರ್ಕ ಉಪಕ್ರಮಗಳ ಬಗ್ಗೆ ಎರಡೂ ಕಡೆಯವರು ಚರ್ಚಿಸಿದ್ದಾರೆ’ ಎಂದು ಎಂಇಎ ವಕ್ತಾರರು ತಿಳಿಸಿದ್ದಾರೆ.
`ಜೆಸಿಪಿಒಎಗೆ ಸಂಬಂಧಿಸಿದಂತೆ, ಎಲ್ಲಾ ಪಕ್ಷಗಳ ನಡುವೆ ರಚನಾತ್ಮಕ ರಾಜತಾಂತ್ರಿಕತೆ ಮತ್ತು ಪರಸ್ಪರ ಚರ್ಚೆಯ ಮೂಲಕ ಎಲ್ಲ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು ಎಂಬ ನಮ್ಮ ನಿಲುವನ್ನು ಮಂಡಿಸಿದ್ದೇವೆ’ ಎಂದು ಎಂಇಎ ವಕ್ತಾರರು ತಿಳಿಸಿದ್ದಾರೆ.

Latest Indian news

Popular Stories