ಗ್ಯಾರಂಟಿಯಿಂದ ಬಿಜೆಪಿ, ಮೋದಿ ಕುರ್ಚಿ ಅಲುಗಾಡ ತೊಡಗಿದೆ: ಎಚ್.ಕೆ.ಪಾಟೀಲ್ ಟೀಕೆ

ಕಾರವಾರ (ಶಿರಸಿ) : ಗ್ಯಾರಂಟಿ ಜಾರಿಯಾದ ಮೇಲೆ ಬಿಜೆಪಿ ಹಾಗೂ ಮೋದಿಯ ಕುರ್ಚಿ ಅಲುಗಾಡ ತೊಡಗಿದೆ. ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡಿದ ಮೋದಿಯವರು ಯಾಕೆ ನಮ್ಮ ಗ್ಯಾರಂಟಿಗಳನ್ನು ನಕಲು ಮಾಡಿದಿರಿ ?. ಬಿಜೆಪಿಯವರನ್ನ ಟೀಕಿಸಿ ಮತ ಕೇಳುವ ಅನಿವಾರ್ಯತೆ ನಮಗಿಲ್ಲ. ನಾವು ಮಾಡಿದ ಅಭಿವೃದ್ಧಿ, ಜಾರಿಗೊಳಿಸಿದ ಗ್ಯಾರಂಟಿಗಳ ಹೆಸರಿನಲ್ಲಿ ಮತ ಕೇಳುತ್ತೇವೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಹುಲೇಕಲ್ ಜಿ.ಪಂ. ವ್ಯಾಪ್ತಿಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನದ ಮೌಲ್ಯ, ಪ್ರಜಾಪ್ರಭುತ್ವದ ಉಳಿವು ಇಂದಿನ ದಿನಗಳಲ್ಲಿ ಪ್ರಶ್ನಾರ್ಹವಾಗುತ್ತಿದೆ. ಹಿಂದಿನ ಚುನಾವಣೆಗಳಿಗೂ ಈ ಬಾರಿಯ ಚುನಾವಣೆಗೂ ಬಹಳ ವ್ಯತ್ಯಾಸವಿದೆ. ಪ್ರಜಾಪ್ರಭುತ್ವದ ಅಳಿವು ಉಳಿವಿನ ಪ್ರಶ್ನೆ ಈ ಚುನಾವಣೆಯಲ್ಲಿದೆ. ಬಿಜೆಪಿ ಗೆದ್ದರೆ ಸಂವಿಧಾನ ಉಳಿಯಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ಜನರ ಬದುಕಿನ ಅಳಿವು- ಉಳಿವಿನ ಪ್ರಶ್ನೆಯೂ ಈ ಚುನಾವಣೆಯಲ್ಲಿದೆ ಎಂದ ಅವರು, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆಂದು ಅವರ ಖರ್ಚು ಹೆಚ್ಚು ಮಾಡಿದ್ದಾರೆ. ಯುವಕರಿಗೆ ಎರಡು ಕೋಟಿ ವಾರ್ಷಿಕ ಉದ್ಯೋಗ ಸೃಷ್ಟಿಸುತ್ತೇವೆಂದು ಜೈಕಾರ ಕೂಗಲು ಬಳಸಿಕೊಂಡರು. ಹತ್ತು ವರ್ಷಗಳಿಂದ ಸುಳ್ಳು, ಮೋಸದಿಂದ ನಡೆದ ಸರ್ಕಾರ ಈಗ ಯಾವ ಮುಖವಿಟ್ಟುಕೊಂಡು ಮತ ಕೇಳಲು ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹಿಂದುಗಳ ತಾಳಿ ಕಿತ್ತು ಮುಸ್ಲಿಮರಿಗೆ ಕೊಡುತ್ತೇವೆನ್ನುವ ನೀಚ ಮಟ್ಟಕ್ಕೆ ಪ್ರಧಾನಿ‌ ಇಳಿಯಬಾರದು. ಭಾರತೀಯ ಸಂಸ್ಕೃತಿಯ ಬಗ್ಗೆ ಅವರಿಗೆ ಅರಿವಿರಬೇಕು. ತಾಳಿ ಕೀಳುವ ಸಂಸ್ಕೃತಿ ನಮ್ಮದಲ್ಲ, ತಾಳಿ ಭಾಗ್ಯ ನೀಡುವ ಸಂಸ್ಕೃತಿ ಕಾಂಗ್ರೆಸ್‌ನದ್ದು. ದೇಶಕ್ಕಾಗಿ ತಾಳಿಯನ್ನೇ ಬಲಿದಾನವಾಗಿ ನೀಡಿದ ಕುಟುಂಬ ಇರುವ ಪಕ್ಷ ಕಾಂಗ್ರೆಸ್. ರೈಲ್ವೆ, ಏರ್ಪೋರ್ಟ್, ಗ್ಯಾಸ್‌ಲೈನ್, ರಸ್ತೆಗಳೆಲ್ಲವನ್ನೂ ಕಾಂಗ್ರೆಸ್ ಭಾರತ ಮಾತೆಗೆ ಆಭರಣವಾಗಿ ನೀಡಿತ್ತು. ಆದರೆ ಅದನ್ನ ಮಾರಾಟ ಮಾಡಿರುವುದು ಬಿಜೆಪಿ. ತಾಯಿಯ ಆರಭರಣವನ್ನ ಕಿತ್ತು ಉದ್ಯಮಿಗಳಿಗೆ ಮಾರಿದ ಬಿಜೆಪಿಯಿಂದ ದೇಶದ ರಕ್ಷಣೆ ನಿರೀಕ್ಷಿಸಬಹುದೇ? ಎಂದು ಪ್ರಶ್ನಿಸಿದರು.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ರಾಜ್ಯದ ಗ್ಯಾರಂಟಿ ಯೋಜನೆ ಮನೆಮನಗಳನ್ನು ಮುಟ್ಟಿದೆ. ಅದಕ್ಕಾಗಿ ಈಗ ಮೋದಿಯವರೇ ಈ ಗ್ಯಾರಂಟಿಯನ್ನ ನಕಲು ಮಾಡಿದ್ದಾರೆ. ಗ್ಯಾರಂಟಿ ಯೋಜನೆ ಸದ್ಬಳಕೆ ಮಾಡಿಕೊಂಡವರೆಲ್ಲರೂ ಕಾಂಗ್ರೆಸ್‌ಗೆ ಮತ ಚಲಾಯಿಸಿದರೆ ಡಾ.ಅಂಜಲಿ ನಿಂಬಾಳ್ಕರರ ಗೆಲುವು ನಿಶ್ಚಿತ ಎಂದರು.

ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಬಡ ಅತಿಕ್ರಮಣದಾರರಿಗೆ ಜಮೀನಿನ ಹಕ್ಕು ನೀಡಬೇಕೆಂಬ ಇಚ್ಛಾಶಕ್ತಿ ಬಿಜೆಪಿಗರಿಗಿಲ್ಲ. ಕಸ್ತೂರಿ ರಂಗನ್ ವರದಿ ಸೇರಿದಂತೆ ಜಿಲ್ಲೆಯ ದೊಡ್ಡ ದೊಡ್ಡ ಸಮಸ್ಯೆಗಳು ಪರಿಹಾರವಾಗಲು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕಿದೆ. ಎಂದರು.

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ಹಿಂದು- ಮುಸ್ಲಿಂ ಎನ್ನುತ್ತಾ, ರಾಮ- ಶಿವಾಜಿಯವರನ್ನ ರಾಜಕೀಯಕ್ಕೆ ತಂದು ಯುವಕರನ್ನ ತಪ್ಪುದಾರಿಗೆ ಎಳೆಯುವುದಷ್ಟೇ ಬಿಜೆಪಿಗರ ಕೆಲಸ. ನಾವು ಜನಸೇವೆ ಮಾಡಲು ಮತ ಕೇಳುತ್ತಿದ್ದೇವೆ. ೩೦ ವರ್ಷಗಳಿಂದ ಆಯ್ಕೆಯಾದ ಸಂಸದರು ಕ್ಷೇತ್ರದ ಜನರ ಬಗ್ಗೆ ಮಾತನಾಡಿಲ್ಲ ಎಂದರು.

ಜಿ.ಪಂ‌.‌ಮಾಜಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ್, ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿಯಾಗಲು ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಬರಲೇಬೇಕು. ಅದಕ್ಕಾಗಿ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ಸಂಸತ್‌ಗೆ ಆಯ್ಕೆ ಮಾಡಿ ಕಳುಹಿಸಿಕೊಡಬೇಕಿದೆ ಎಂದರು‌.

ಈ ಸಂದರ್ಭದಲ್ಲಿ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ್ರು, ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ, ಯೂತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ವೆಂಕಟೇಶ್ ಹೆಗಡೆ ಹೊಸಬಾಳೆ, ಯಲ್ಲಾಪುರ ಪ್ರಚಾರ ಸಮಿತಿ ಅಧ್ಯಕ್ಷ ಸಿ.ಬಿ.ಗೌಡ, ಜಿ.ಪಂ ಮಾಜಿ ಸದಸ್ಯ ಜಿ.ಎನ್.ಹೆಗಡೆ, ಜ್ಯೋತಿ ಪಾಟೀಲ್, ಶ್ರೀನಿವಾಸ ನಾಯ್ಕ, ಹುಲಿಕಲ್ ಗ್ರಾ.ಪಂ ಅಧ್ಯಕ್ಷ ಖಾಸಿಂ ಸಾಬ್ ಮುಂತಾದವರು ಉಪಸ್ಥಿತರಿದ್ದರು.
***

Latest Indian news

Popular Stories