ಮಡಿಕೇರಿ; ನ. 21: ಮಾಹಿತಿ ಕೊರತೆಯಿಂದಾಗಿ ಜಿಲ್ಲೆಯ ಅಧಿಕೃತ ಹೋಂ ಸ್ಟೇಗಳಿಗೆ ಅಧಿಕಾರಿಗಳಿಂದ ಕಿರುಕುಳ ಆರಂಭವಾಗಿದೆ ಎಂದು ಮಾಲೀಕರುಗಳು ಆಕ್ಷೇಪಿಸಿದರು.
ತಾ 19 ರಂದು ಕುಶಾಲನಗರದಲ್ಲಿ ನಡೆದ ಮಹಾಸಭೆಯಲ್ಲಿ ಅಸಮಾಧಾನದ ಕೂಗು ಸದಸ್ಯರುಗಳಿಂದ ಕೇಳಿ ಬಂದಿದ್ದು ಕೆಲವೆಡೆ ಗ್ರಾಮ ಪಂಚಾಯತಿಗಳಿಂದ ಹಾಗೂ ಇನ್ನು ಹಲವೆಡೆ ಪೊಲೀಸರಿಂದ ನೋಂದಣಿ ಹಾಗೂ ನಿರಪೇಕ್ಷಣಾ ಪತ್ರ ಪಡೆಯುವ ಬಗ್ಗೆ ರಾಜ್ಯ ಸರಕಾರದ ಸುತ್ತೋಲೆಯ ಆದೇಶ ಮೀರಿ ವರ್ತಿಸಲಾಗಿದೆ ಎಂದು ದೂರು ಕೇಳಿ ಬಂದಿತು.
ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ. ಅನಂತಶಯನ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಸರಕಾರ ಹೊರಡಿಸಿರುವ ಅಧಿಕೃತ ಆದೇಶದ ಪ್ರತಿಗಳನ್ನು ವಿತರಿಸಿ, ಅದರ ಆಧಾರದಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಲು ಸೂಚಿಸಲಾಯಿತು. ಗ್ರಾಮ ಪಂಚಾಯತಿಗಳೂ ನಿರಪೇಕ್ಷಣಾ ಪತ್ರ ನೀಡಲು ಅಂದಿನ ಸಿ.ಇ.ಒ ಚಾರುಲತಾ ಅವರು ಗರಿಷ್ಠ ರೂ 500 ಮಾತ್ರ ಸ್ವೀಕರಿಸಲು ನೀಡಿದ್ದ ಆದೇಶದ ಪ್ರತಿಗಳನ್ನೂ ಸದಸ್ಯರಿಗೆ ವಿವರಿಸಿ ನೀಡಲಾಯಿತು. ಪೊಲೀಸರು ಹಾಗೂ ಗ್ರಾಮ ಪಂಚಾಯತ್‍ಗಳು ಮಿತಿಮೀರಿ ಹಣ ಕೇಳುವದು ಜಾರಿಯಾಗಿರುವ ಪ್ರವಾಸೋದ್ಯಮ ನೀತಿಗೆ ವಿರುದ್ಧ ಎಂದು ಸಭೆಯಲ್ಲಿ ಹೇಳಲಾಯಿತು.
ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ ಹೋಂಸ್ಟೇಗಳಿಗೆ ಒಮ್ಮೆ ಪರವಾನಗಿ ದೊರೆತ ಬಳಿಕ ಐದು ವರುಷದವರೆಗೆ ಯಾವದೇ ಇಲಾಖೆಗಳಿಂದ ನಿರಪೇಕ್ಷಣಾ ಪತ್ರ ಪಡೆಯುವ ಅವಶ್ಯಕತೆ ಇಲ್ಲ, ಈ ಕುರಿತು ಪೊಲೀಸ್ ಉನ್ನತಾಧಿಕಾರಿಗಳಿಗೆ ಸರಕಾರದ ನೋಟಿಫಿಕೇಷನ್ ಸಹಿತ, ಮನವರಿಕೆ ಮಾಡಲಾಗಿದೆ ಎಂದರು.
ರಾಜ್ಯ ಪ್ರವಾಸೋದ್ಯಮ ನೀತಿ ಕರಡು ಪ್ರತಿ ತಯಾರಿಸುವಾಗ ರಾಜ್ಯದ ಇತರ ಹಲವು ಜಿಲ್ಲೆಗಳನ್ನು ಅಭಿವೃದ್ಧಿ ಪಡಿಸಲು ಸರಕಾರ ಯೋಜನೆ ರೂಪಿಸಿದ್ದು, ಕೊಡಗಿನ ಹೆಸರನ್ನೇ ಕೈ ಬಿಡಲಾಗಿತ್ತು. ಈ ಕುರಿತು ಪ್ರವಾಸೋದ್ಯಮ ಇಲಾಖಾ ನಿರ್ದೇಶಕ ರಮೇಶ್ ಹಾಗೂ ಸಚಿವರೊಂದಿಗೆ ಪತ್ರ ವ್ಯವಹಾರ ಹಾಗೂ ನೇರ ಚರ್ಚೆ ನಡೆಸಲಾಯಿತು ಎಂದು ಅನಂತಶಯನ ಹೇಳಿದರು. ಇದೀಗ ಕೊಡಗಿನ ಹೆಸರನ್ನು ಪ್ರಾಮುಖ್ಯತೆಯೊಂದಿಗೆ ಸೇರಿಸಿದ್ದು, ಇಲಾಖೆಯ ಕ್ರಮ ಶ್ಲಾಘನಾರ್ಹ ಎಂದು ಅಭಿನಂದಿಸಿದರು.
ಜಿಲ್ಲೆಯಲ್ಲಿ ಅನಧಿಕೃತ ಹೋಂಸ್ಟೇಗಳ ಸಂಖ್ಯೆ ಇಳಿಮುಖವಾಗಿದ್ದರೂ, ಇನ್ನೂ ಸಾಕಷ್ಟು ಕಡೆ ಅಕ್ರಮ ವ್ಯವಹಾರ ಮುಂದುವರಿದಿದೆ. ಇದನ್ನು ಜಿಲ್ಲಾ ಆಡಳಿತ ಕ್ರಮಬದ್ಧವಾಗಿ ಹದ್ದು ಬಸ್ತಿಗೆ ತರಬೇಕು ಎಂದು ಅನಂತಶಯನ ಒತ್ತಾಯಿಸಿದರು. ಪ್ರತಿ ಇಲಾಖೆಗಳೂ ಪ್ರವಾಸೋದ್ಯಮ ನೀತಿಯನ್ನು ಸರಿಯಾಗಿ ಅರಿತು ವ್ಯವಹರಿಸಬೇಕೆಂದು ಹೇಳಿದರು.
ವೃತ್ತಿ ಘನತೆ ಉಳಿಸಲು ಹೋಂಸ್ಟೇಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಮಾಜಿ ಅಧ್ಯಕ್ಷ ದಿಲೀಪ್ ಚೆಂಗಪ್ಪ ಮಾತನಾಡಿದರು.
ಮಾಜಿ ಅಧ್ಯಕ್ಷ ಕರುಂಬಯ್ಯ ಹೋಂಸ್ಟೇ ನೀತಿ-ನಿಯಮಗಳು ಹಾಗೂ ಹೊಸ ಪ್ರವಾಸೋದ್ಯಮ ನೀತಿಯ ಕುರಿತು ಹೇಳಿದರು.
ಕಾರ್ಯದರ್ಶಿ ಮೀನ ಕಾರ್ಯಪ್ಪ ವಾರ್ಷಿಕ ವರದಿ ಓದಿದರು. ಖಜಾಂಚಿ ಉಷಾ ಗಣಪತಿ ಲೆಕ್ಕಪತ್ರ ಮಂಡಿಸಿದರು. ಮಾಜಿ ಅಧ್ಯಕ್ಷ ವಿಜು ಚೆಂಗಪ್ಪ ಪ್ರಾರ್ಥಿಸಿದರು. ಮದನ್ ಸೋಮಣ್ಣ ಅವರಿಂದ ಕೊನೆಹನಿ ಮತ್ತು ಉಪಾಧ್ಯಕ್ಷೆ ನಿಮ್ಮಿ ಚೆಂಗಪ್ಪ ಅವರಿಂದ ವಂದನಾರ್ಪಣೆ ನೆರವೇರಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಬಾಬಿ ಉಪಸ್ಥಿತರಿದ್ದರು. ಸಹ ಕಾರ್ಯದರ್ಶಿ ಎ.ಕೆ. ನವೀನ್, ಮಾಜಿ ಅಧ್ಯಕ್ಷ ಮಿಕ್ಕಿ ಕಾಳಪ್ಪ, ಸದಸ್ಯರುಗಳಾದ ಹೇಂ ಮಾದಪ್ಪ, ಮೋಂತಿ ಗಣೇಶ್, ದÀಂಬೆಕೋಡಿ ಪ್ರೇಂ, ಮುದ್ದಪ್ಪ, ಪ್ರಭುದೇವ್, ಸಂಗೀತ, ಸವಿತ, ವಿದ್ಯ, ಕಲ್ಪನಾ, ಜಯಶ್ರೀ ಹಾಗೂ ಇತರರು ಹಾಜರಿದ್ದರು.