ರಸ್ತೆ ದುರಸ್ತಿಗೆ ಮಡಿಕೇರಿ ಹಿತರಕ್ಷಣಾ ವೇದಿಕೆ ಒತ್ತಾಯ

ಮಡಿಕೇರಿ ಜ. 7 : ನಗರದ ಹಲವು ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರಿಗೂ ಹಾಗೂ ಪಾದಚಾರಿಗಳಿಗೆ ನಡೆದಾಡಲು ತೊಂದರೆ ಉಂಟಾಗುತ್ತಿದ್ದು, ಕೂಡಲೇ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗದಿದ್ದಲ್ಲಿ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದೆಂದು ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ನಗರಸಭೆ ಪೌರಯುಕ್ತ ರಾಮ್‍ದಾಸ್ ಅವರಿಗೆ ಮನವಿ ಪತ್ರ ನೀಡಿದ ವೇದಿಕೆಯ ಪ್ರಮುಖರು ಹಾಗೂ ಸ್ಥಳೀಯ ನಿವಾಸಿಗಳು ನಗರದ ಹೊಸ ಬಡಾವಣೆಯ ಸಬ್ ರಿಜಿಸ್ಟರ್ ಕಚೇರಿಯಿಂದ ಜನನಿ ಆಸ್ಪತ್ರೆ, ಹಳೆ ಇಂಡಿಯನ್ ಗ್ಯಾಸ್ ಕಚೇರಿ, ಗೌಳಿ ಬೀದಿ ಹಾಗೂ ಡಾಕ್ಟರ್ ಅನಿಲ್ ಚಂಗಪ್ಪನವರ ಮನೆಗೆ ಹೋಗುವ ರಸ್ತೆಗಳನ್ನು ಕೂಡಲೇ ಮರು ಡಾಂಬರೀಕರಣ ಮಾಡಿಕೊಡುವಂತೆ ಒತ್ತಾಯಿಸಿದರು.
ಕಾಮಗಾರಿಯಲ್ಲಿ ಯಾವುದೇ ರೀತಿಯಲ್ಲಿ ಕಳಪೆ ನಡೆಯದಂತೆ ಗುತ್ತಿಗೆದಾರರಿಗೆ ಆದೇಶ ನೀಡುವಂತೆ ಮನವಿ ಮಾಡಿದರು. ಒಂದು ವಾರದಲ್ಲಿ ಕಾಮಗಾರಿ ಆರಂಭವಾಗದಿದ್ದಲಿ ಸ್ಥಳೀಯ ನಿವಾಸಿಗಳು, ಆಟೋ ಚಾಲಕರು ಹಾಗೂ ಸಂಘ-ಸಂಸ್ಥೆಗಳ ಸಹಕಾರದಿಂದ ರಸ್ತೆತಡೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭ ನಗರಸಭೆ ಆಯುಕ್ತ ರಾಮ್‍ದಾಸ್ ಮಾತನಾಡಿ, ಮಡಿಕೇರಿ ನಗರದ ಎಲ್ಲಾ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಈ ರಸ್ತೆಯ ಕಾಮಗಾರಿಗೆ ಒಂದು ವಾರದ ಒಳಗೆ ಚಾಲನೆ ನೀಡುವುದಾಗಿ ಭರವಸೆ ನೀಡಿದರು.
ವೇದಿಕೆಯ ಅಧ್ಯಕ್ಷರಾದ ರವಿ ಗೌಡ, ಸದಸ್ಯರಾದ ಸುರೇಶ್ ಕುಮಾರ್, ಸತೀಶ್ ಪೈ, ಲಿಲ್ಲಿ, ನಾಗೇಶ್, ನಿವಾಸಿಗಳಾದ ಮಂಡಿರ ತಮ್ಮಿ, ಹರೀಶ್ ಮುತ್ತಪ್ಪ, ವಸಂತ್ ಹಾಗೂ ಇನ್ನೂ ಹಲವರು ಹಾಜರಿದ್ದರು.

Latest Indian news

Popular Stories