ಮುಂಬೈ: ನಗರ ಸಾರಿಗೆ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಬಲಪಡಿಸುವ ಮೂಲಕ ಜನರ ಚಲನಶೀಲತೆಯನ್ನು ಹೆಚ್ಚಿಸುವ ದೃಷ್ಟಿಕೋನಕ್ಕೆ ಅನುಗುಣವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶಳದ ಅತಿ ಉದ್ದದ ಸಮುದ್ರ ಸೇತುವೆಯಾಗಿರುವಂತ ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್ ಅನ್ನು ಉದ್ಘಾಟಿಸಿದರು.
ಈಗ ‘ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವಾ ಶೇವಾ ಅಟಲ್ ಸೇತು’ ಎಂದು ಹೆಸರಿಸಲಾಗಿರುವ ಈ ಸೇತುವೆಯನ್ನು 17,840 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಸಮುದ್ರದ ಮೇಲೆ 16.5 ಕಿ.ಮೀ ಉದ್ದ ಮತ್ತು ಭೂಮಿಯಲ್ಲಿ ಸುಮಾರು 5.5 ಕಿ.ಮೀ ಉದ್ದವನ್ನು ಹೊಂದಿರುವ ಇದು ಭಾರತದ ಅತಿ ಉದ್ದದ ಸೇತುವೆ ಮಾತ್ರವಲ್ಲದೆ ದೇಶದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ. ಈ ಸೇತುವೆಯು ಒಟ್ಟು 21.8 ಕಿ.ಮೀ ಉದ್ದವಿದ್ದು, ಆರು ಪಥಗಳನ್ನು ಹೊಂದಿರುತ್ತದೆ.
ಈ ಯೋಜನೆಯು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವೀ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎರಡಕ್ಕೂ ಸಂಪರ್ಕವನ್ನು ಹೆಚ್ಚಿಸುತ್ತದೆ.
ಮುಂಬೈ ಮತ್ತು ಪುಣೆ, ಗೋವಾ ಮತ್ತು ದಕ್ಷಿಣ ಭಾರತದ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಇದು ಮುಂಬೈ ಬಂದರು ಮತ್ತು ಜವಾಹರಲಾಲ್ ನೆಹರು ಬಂದರು ನಡುವಿನ ಸುಧಾರಿತ ಸಂಪರ್ಕಕ್ಕೆ ಕೊಡುಗೆ ನೀಡುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.