
ಕೇಂದ್ರವನ್ನು ಟೀಕಿಸಿದ ನಟ ಸಿದ್ಧಾರ್ಥಗೆ ಕೊಲೆ ಬೆದರಿಕೆ
ಚನ್ನೈ : ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವನ್ನು ಟೀಕಿಸಿದ್ದ ತಮಿಳು ನಟ ಸಿದ್ಧಾರ್ಥ ಅವರಿಗೆ ಬೆದರಿಕೆ ಕರೆ ಬರತೊಡಗಿವೆ. ನಿಂದನೆ, ಅತ್ಯಾಚಾರ ಮತ್ತು ಮಾರಣಾಂತಿಕ ಬೆದರಿಕೆಯ ಕರೆಗಳು ಬರುತ್ತಿವೆ ಎಂದು ಸ್ವತ: ಸಿದ್ಧಾರ್ಥ ಹೇಳಿದ್ದಾರೆ.
ನನಗೆ ಮತ್ತು ಕುಟುಂಬಕ್ಕೆ ಕಳೆದ 24 ಗಂಟೆಯಲ್ಲಿ 500 ಕ್ಕೂ ಅಧಿಕ ಕರೆಗಳು ಬಂದಿವೆ. ಎಲ್ಲ ಕರೆಗಳ ವಿವರನ್ನು ಪೊಲೀಸರಿಗೆ ನೀಡಲಾಗಿದೆ ಎಂದು ಸಿದ್ಧಾರ್ಥ ಟ್ವೀಟ್ ಮಾಡಿದ್ದಾರೆ.
ತಮಿಳುನಾಡು ಬಿಜೆಪಿ ಐಟಿ ಸೆಲ್ ತಮ್ಮ ಮೊಬೈಲ್ ಸಂಖ್ಯೆಯನ್ನು ಸೋರಿಕೆ ಮಾಡಿದೆ ಎಂದು ನಟ ಆರೋಪಿಸಿದ್ದಾರೆ.
ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ಹೀಗೆ ಪ್ರಯತ್ನ ಮಾಡುತ್ತೀರಿ ಎಂದು ಬರೆದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಸಿದ್ಧಾರ್ಥ್ ಟ್ಯಾಗ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನೇರವಾಗಿ ಬೆದರಿಕೆ ಹಾಕಿರುವ ಕೆಲವರ ಸ್ಕ್ರೀನ್ ಶಾಟ್ಗಳನ್ನು ಶೇರ್ ಮಾಡಿಕೊಂಡಿರುವ ಸಿದ್ಧಾರ್ಥ, ತಮಿಳುನಾಡಿನ ಬಿಜೆಪಿ ಸದಸ್ಯರು ನನಗೆ ಕಿರುಕುಳ ನೀಡಲು ಕೆಲ ಕಿಡಿಗೇಡಿಗಳನ್ನು ಛೂ ಬಿಟ್ಟಿದ್ದಾರೆ. ಹೀಗಾಗಿ ನಿನ್ನೆಯಿಂದ ಅನೇಕರು ನನ್ನ ಮೇಲೆ ಜಾಲತಾಣದಲ್ಲಿ ದಾಳಿ ಮಾಡುತ್ತಿದ್ದಾರೆ. ನಾವು ಕೋವಿಡ್ನಿಂದ ಬದುಕಬಹುದು. ಆದರೆ, ಇಂತಹ ಜನರಿಂದ ಬದುಕುತ್ತೇವೆಯೇ? ಎಂದು ಸಿದ್ಧಾರ್ಥ ಪ್ರಶ್ನಿಸಿದ್ದಾರೆ.




