ನನ್ನ ಸೋಲು, ಗೆಲುವನ್ನು ಮಂಡ್ಯದ ಜನ ತೀರ್ಮಾನಿಸ್ತಾರೆ: ಕುಮಾರಸ್ವಾಮಿ

ಮೈಸೂರು(ಮಾ.28): ಮಂಡ್ಯದಲ್ಲಿ ನಾನು ಗೆಲ್ತೇನೋ, ಇಲ್ವೋ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. ಮಂಡ್ಯದಲ್ಲಿ ಕುಮಾರಸ್ವಾಮಿ ಸೋಲು ಗ್ಯಾರಂಟಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಬುಧವಾರ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ನಾಯಕರು ಒಳಗೋ, ಹೊರಗೋ ಏನು ಬೇಕಾದರೂ ಯೋಜನೆ ರೂಪಿಸಿಕೊಳ್ಳಲಿ.

ಆದರೆ ಮಂಡ್ಯದ ಜನ ನನಗೆ ಒತ್ತಡ ಹಾಕಿದ್ದಾರೆ. ನಾನೊಬ್ಬ ಕನ್ನಡಿಗ, ನನಗೆ ಮಂಡ್ಯ ಕ್ಷೇತ್ರ ರಾಜಕೀಯವಾಗಿ ಶಕ್ತಿ ತುಂಬಲಿದೆ ಎಂದರು.

ಮುಖ್ಯಮಂತ್ರಿಯಾಗಿದ್ದರೂ ನನಗೆ ನನ್ನ ಮಗನನ್ನೇ ಗೆಲ್ಲಿಸಲು ಆಗದೇ ಹೋದದ್ದರ ಹಿಂದೆ ಕಾಂಗ್ರೆಸ್ ನ ಪಾಲು ಇಲ್ವೇ? ಆಗ ನಾವು ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡಿರಲಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಹಿಂದೆ ನೀವೇ (ಸಿದ್ದರಾಮಯ್ಯ) ಮುಖ್ಯಮಂತ್ರಿಯಾಗಿದ್ದರೂ ಮೈಸೂರು ಕ್ಷೇತ್ರ ಯಾಕೆ ಗೆಲ್ಲಲು ಸಾಧ್ಯವಾಗಲಿಲ್ಲ? ಈಗ ನಿಮ್ಮ ಮಾತಿಗೆ ಜನ ಉತ್ತರ ಕೊಡುತ್ತಾರೆ ಎಂದರು.
ಬಿಜೆಪಿ-ಜೆಡಿಎಸ್‌ ಮೈತ್ರಿಯೇ ಕಾಂಗ್ರೆಸ್‌ಗೆ ವರದಾನವಾಗಲಿದೆ ಎನ್ನುತ್ತಿರುವ ಸಿದ್ದರಾಮಯ್ಯ ಅವರು ಅದೇ ಗುಂಗಿನಲ್ಲಿರಲಿ. ಚುನಾವಣಾ ಫಲಿತಾಂಶ ಬಂದ ಬಳಿಕ ಅವರಿಗೆ ಏನೆಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಮೊದಲು ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ವ್ಯಕ್ತವಾಗಿರುವ ಪ್ರವಾಹ ತಡೆಯಲಿ. ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೋ, ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೋ ಎಂಬುದು ಮುಖ್ಯವಲ್ಲ, ಬಿಜೆಪಿ- ಜೆಡಿಎಸ್ ಒಂದಾದರೆ ಎರಡು ಒಂದೇ ಅಲ್ವಾ? ಬೆಂಗಳೂರು ಗ್ರಾಮಾಂತರದಲ್ಲಿ ಅವರು ಈಗಾಗಲೇ ಸೋಲುವ ಭಯದಿಂದ ಕುಕ್ಕರ್‌ ಹಂಚಿದ್ದು, ಈಗ ದುಡ್ಡು ಹಂಚುತ್ತಿದ್ದಾರೆ ಎಂದು ದೂರಿದರು.

Latest Indian news

Popular Stories