ಬಳ್ಳಾರಿ,ಡಿ.30:- ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿಯ ಹೊಸ ವರ್ಷವನ್ನು ಅತ್ಯಂತ ಸರಳವಾಗಿ ಹಾಗೂ ಶಾಂತಿಯುತವಾಗಿ ಆಚರಿಸಬೇಕು ಎಂದು ಜಿಲ್ಲೆಯ ಜನರಲ್ಲಿ ಮನವಿ ಮಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಬಾರಿ ಅತ್ಯಂತ ಶಾಂತಿಯುತವಾಗಿ ಹೊಸ ವರ್ಷವನ್ನು ಆಚರಿಸಿ. ದಿನೇದಿನೇ ಕೋವಿಡ್-19 ಪ್ರಕರಣಗಳು ಕಡಿಮೆಯಾಗುತ್ತಿವೆ. ಇನ್ನಷ್ಟು ನಿಯಂತ್ರಿಸುವ ಸಲುವಾಗಿ ಸರಳವಾಗಿ ಹೊಸ ವರ್ಷ ಆಚರಿಸಿ. ಹೊಸದಾಗಿ ಬ್ರಿಟನ್ ಕೊರೋನಾ ಭೀತಿಯೂ ಸಹ ಇದೆ. ಡಿ.31 ರಿಂದ ಜ.2 ರವರೆಗ ಮಧ್ಯರಾತ್ರಿ ಹನ್ನೆರಡು ಗಂಟೆಯ ಮೇಲೆ ಪಬ್, ಕ್ಲಬ್, ರೆಸ್ಟೋರೆಂಟ್‍ಗಳನ್ನು ತೆರೆಯುವಂತಿಲ್ಲ ಎಂದರು. ಡಿಜೆ ಹಾಕಿಕೊಂಡು ಪಾರ್ಟಿ ಮಾಡುವಂತಿಲ್ಲ;ಈಗಾಗಲೇ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದರು.
ಜಿಲ್ಲೆಯ ಎಲ್ಲಾ ಮುಖ್ಯ ರಸ್ತೆಗಳು ಮತ್ತು ಆಯಾ ತಾಲೂಕಿನ ಪ್ರಮುಖ ನಗರ,ಪಟ್ಟಣ ಕೇಂದ್ರಗಳಲ್ಲಿ ಈಗಾಗಲೇ ಬ್ಯಾರಿಕೇಡ್ ಮತ್ತು ಚೆಕ್‍ಪೋಸ್ಟ್‍ಗಳನ್ನು ಹಾಕಲಾಗಿದೆ. ಹೊಸ ವರ್ಷ ಆಚರಣೆ ದಿನ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಕಲ ಕ್ರಮಕೈಗೊಂಡಿದೆ ಎಂದರು.
ಕೋವಿಡ್‍ನಿಂದ ಸಾರ್ವಜನಿಕರು ಬದುಕುವ ಪದ್ಧತಿಯೇ ಬದಲಾಗಿದೆ. ಹೊಸ ವರ್ಷದ ಖುಷಿಯಲ್ಲಿ ಎಲ್ಲರೂ ಒಂದು ಕಡೆ ಸೇರಿ ವಿಶೇಷ ಪಾರ್ಟಿಗಳನ್ನು ಮಾಡುವುದರಿಂದ ಕೊರೋನ ಹರಡುವಿಕೆ ಹೆಚ್ಚಾಗಬಹುದು. ಹಾಗಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ, ಗೆಳಯರೊಂದಿಗೆ ಸರಳವಾಗಿ ಆಚರಣೆ ಮಾಡಿ ಎಂದು ಸಲಹೆ ನೀಡಿದರು.
ಆನ್‍ಲೈನ್ ಖದೀಮರ ಬಗ್ಗೆ ಇರಲಿ ಎಚ್ಚರ: ಮೊಬೈಲ್ ಮತ್ತು ಇ-ಮೇಲ್ ಐಡಿಗಳಿಗೆ ಸಂದೇಶ ಕಳುಹಿಸಿ ಉಚಿತವಾಗಿ ಹಣ ಬರುತ್ತೆ ಎಂದು ಯಾಮಾರಿಸುವ ಮೂಲಕ ಅಮಾಯಕರಿಂದ ಹಣ ಪಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದು ಹ್ಯಾಕರ್‍ಗಳ ಕೆಲಸವಾಗಿದೆ. ಜನರು ಆನ್‍ಲೈನ್ ಖದೀಮರ ಬಗ್ಗೆ ಎಚ್ಚರವಹಿಸಬೇಕು ಎಂದು ಎಸ್ಪಿ ಸೈದುಲು ಅಡಾವತ್ ಅವರು ಸಲಹೆ ನೀಡಿದರು.
ಜಾರ್ಖಾಂಡ್, ಉತ್ತರ ಪ್ರದೇಶ, ದೆಹಲಿಯ ಹ್ಯಾಕರ್‍ಗಳು ರಾಜ್ಯದ ಅಮಾಯಕ ಜನರಿಂದ ಹಣವನ್ನು ಯಾಮಾರಿಸಿ ದೋಚುತ್ತಿದ್ದಾರೆ. ಇದರ ಸುಳಿಗೆ ಸಿಲುಕಿದ ಹಲವಾರು ಜನರು ಸಾಲ ಮಾಡಿ, ಬಂಗಾರ ಅಡವಿಟ್ಟು ಹ್ಯಾಕರ್‍ಗಳಿಗೆ ದುಡ್ಡು ಕಳಿಸಿದ್ದಾರೆ. ಆದರೆ ಅವರಿಗೆ ಯಾವುದೇ ಹಣ ಬಂದಿಲ್ಲ, ಬದಲಾಗಿ ತಾವು ಕಳಿಸಿದ ಹಣವೂ ಕಳ್ಳರ ಪಾಲಾಗಿದೆ ಎಂದು ವಿವಿಧ ಉದಾರಣೆಗಳನ್ನು ನೀಡಿದ ಎಸ್ಪಿ ಅವರು ಕಳೆದ ತಿಂಗಳಲ್ಲಿ ಈ ಕುರಿತು ಮೂರು ಪ್ರಕರಣಗಳು ದಾಖಲಾಗಿವೆ ಎಂದರು.
ಆನ್‍ಲೈನ್ ಖದೀಮರ ಬಗ್ಗೆ ಎಚ್ಚರವಹಿಸಿ ಇಂತಹ ಸಂದೇಶಗಳು ನಿಮ್ಮ ಮೊಬೈಲ್‍ಗೆ ಬಂದರೆ ಅವುಗಳನ್ನು ನಿರ್ಲಕ್ಷಿಸಿ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆ ಅತ್ಯಂತ ಸುಸೂತ್ರವಾಗಿ ಜರುಗಿದ್ದು, 79 ಅಬಕಾರಿ ಸಂಬಂಧಿತ ಪ್ರಕರಣಗಳು ದಾಖಲಾಗಿವೆ.1500 ಲೀಟರ್ ಮದ್ಯವಶಪಡಿಸಿಕೊಳ್ಳಲಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ 250 ಪ್ರಕರಣ ದಾಖಲಾಗಿವೆ ಎಂದು ಅವರು ವಿವರಿಸಿದರು.