Crime

ಮತದಾರರ ಪಟ್ಟಿ ಬದಲಾವಣೆ ಇಲ್ಲ; ಬಿಎಸ್‍ಎಸ್‍ಕೆ ಚುನಾವಣೆಗೆ ಆದೇಶ

ಬೀದರ್,ಜ.21:- ಬೀದರ್ ಸಹಕಾರ ಸಕ್ಕರೆ ಕಾರಖಾನೆಯ ಆಡಳಿತ ಮಂಡಳಿ ಚುನಾವಣೆಗೆ ಅಡ್ಡಿಯಾಗಿದ್ದ ತೊಡಕುಗಳು ನಿವಾರಣೆಯಾಗಿವೆ. ಹಿಂದೆ ಸಿದ್ಧಪಡಿಸಲಾಗಿದ್ದ ಮತದಾರರ ಪಟ್ಟಿಯಂತೆಯೇ ಚುನಾವಣೆ ನಡೆಯಲಿದೆ.
ಈ ಕುರಿತು ಸಹಕಾರ ಸಂಘಗಳ ಜಂಟಿ ನಿಬಂಧಕರು ಜನವರಿ 18 ರಂದು ಆದೇಶ ಹೊರಡಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯವು ಡಿಸೆಂಬರ್ 22 ರಂದು ಆದೇಶ ನೀಡಿತ್ತು. ಕೋರ್ಟ್ ಆದೇಶದಂತೆ ಮತದಾರರ ಪಟ್ಟಿಯಲ್ಲಿನ ದೋಷಗಳ ಕುರಿತು ಸಹಕಾರ ನಿರೀಕ್ಷಕ ಸೋಮಶೇಖರ ಬಿರಾದಾರ್ ಅವರು ಪರಿಶೀಲನಾ ವರದಿ ಸಲ್ಲಿಸಿದ್ದರು. ಈ ವರದಿ ಆಧಾರದಲ್ಲಿ ಜಂಟಿ ನಿಬಂಧಕರು ಚುನಾವಣೆ ನಡೆಸುವಂತೆ ಹುಮನಾಬಾದ್ ತಹಸೀಲ್ದಾರರಿಗೆ ಸೂಚನೆ ನೀಡಿದ್ದಾರೆ. ಫೆಬ್ರವರಿ ಮೊದಲ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ವಾಸ್ತವಿಕವಾಗಿ ಮೂರು ತಿಂಗಳ ಹಿಂದೆಯೇ ಆಡಳಿತ ಮಂಡಳಿ ಚುನಾವಣೆ ನಡೆಯಬೇಕಿತ್ತು. ಆದರೆ, ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈ ಬಿಡಲಾಗಿದೆ ಎಂದು ಆರೋಪಿಸಿ ವಿಶ್ವನಾಥ ಮಾಡಗೂಳ, ರವಿಕಾಂತ ಹೂಗಾರ ಮತ್ತು ಬಸವರಾಜ ರತ್ನಾಪುರೆ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಸೂಚನೆಯಂತೆ ಈ ದೂರುಗಳ ಕುರಿತು ಸಹಕಾರ ನಿರೀಕ್ಷಕ ಸೋಮಶೇಖರ ಬಿರಾದಾರ್ ಅವರು ವಿಚಾರಣೆ ನಡೆಸಿದ್ದರು. ಮೂರು ಜನರು ಐದು ವರ್ಷಗಳ ಅವಧಿಯಲ್ಲಿ ನಡೆದ 3 ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗಿದ್ದರು. ಜೊತೆಗೆ ಕಾರಖಾನೆಯ ಕನಿಷ್ಠ ಸೌಲಭ್ಯಗಳನ್ನು ಬಳಸಿಕೊಂಡಿರಲಿಲ್ಲ. ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಕಲಂ 20(2) (ಎ-5) ರ ಪ್ರಕಾರ ಅಧಿನಿಯಮ ಪಾಲನೆ ಮಾಡದ ಸದಸ್ಯರು ಮತ ಚಲಾಯಿಸುವ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಹೊಂದಿರುವುದಿಲ್ಲ.
ಈಗಾಗಲೇ ಸಿದ್ಧಪಡಿಸಿರುವ ಮತದಾರರ ಪಟ್ಟಿಯನ್ನೇ ಪರಿಗಣಿಸಿ ಕಾರಖಾನೆಯ ಆಡಳಿತ ಮಂಡಳಿಗೆ ಚುನಾವಣಾ ಪ್ರಕ್ರಿಯೆ ನಡೆಸಬೇಕು ಎಂದು ಜಂಟಿ ನಿಬಂಧಕರು ಹುಮನಾಬಾದ್ ತಹಸೀಲ್ದಾರರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button