Crime

ರಾಯಚೂರು: ನರೇಗಾ ಕಾರ್ಮಿಕರಿಗೆ ಗೌರವ ಹಾಗೂ ಸೌಲಭ್ಯಗಳು ನೀಡಿ- ಅನಿರುದ್ಧ ಶ್ರವಣ

ರಾಯಚೂರು,ಅ.06- ಕೆಲಸ ಅರಸಿ ಬರುವ ಕೂಲಿ ಕಾರ್ಮಿಕರನ್ನು ಗೌರವದಿಂದ ಕಾಣಬೇಕು ಮತ್ತು ಕಾನೂನು ರೀತ್ಯ ದೊರೆಯುವ ಸೌಲಭ್ಯಗಳನ್ನು ಅವರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಆರ್.ಡಿ.ಪಿ.ಆರ್. ಆಯುಕ್ತ ಅನಿರುದ್ಧ ಶ್ರವಣ ಅವರು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಅವರು ಅ.6ರ ಮಂಗಳವಾರ ಶಕ್ತಿನಗದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನಕ್ಕಾಗಿ ರಾಯಚೂರ ಜಿಲ್ಲಾ ಪಂಚಾಯತಿಯಲ್ಲಿ ಹೊಸದಾಗಿ ನೇಮಕಗೊಂಡಿರುವ ತಾಂತ್ರಿಕ ಸಂಯೋಜಕರು ಮತ್ತು ತಾಂತ್ರಿಕ ಸಹಾಯಕ ಅಭಿಯಂತರರುಗಳಿಗೆ ಆಯೋಜಿಸಲಾಗಿದ್ದ ಹತ್ತು ದಿನಗಳ ಪ್ರವೇಶಾತಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ವಿಡಿಯೋ ಸಂವಾದ ಉದ್ದೇಶಿಸಿ ಮಾತನಾಡಿದರು.
ಯೋಜನೆಯ ಯಶಸ್ವಿ ಅನುಷ್ಟಾನಕ್ಕಾಗಿ ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುವದರೊಂದಿಗೆ, ವಿನಿಯೋಗಿಸುವ ಪ್ರತಿ ರೂಪಾಯಿಯ ಸದ್ಬಳಕೆ ಮಾಡಿ ಉತ್ತಮ ಗುಣಮಟ್ಟದ ಆಸ್ತಿಗಳನ್ನು ಸೃಷ್ಟಿಸಲು ಯೋಜನಾಬದ್ಧವಾಗಿ ಕಾರ್ಯನಿರ್ವಹಿಸಿ ವೃತ್ತಿಗೌರವವನ್ನು ಎತ್ತಿ ಹಿಡಿಯುವಂತೆ ಅವರು ಕಿವಿಮಾತು ಹೇಳಿದರು.
ಆಯ್ಕೆ ಸಂದರ್ಭದಲ್ಲಿ ಮಹಿಳೆಯರಿಗೂ ಪ್ರಾಶಸ್ತ್ಯ ನೀಡಿರುವುದು ಉಲ್ಲೇಖನೀಯವಾಗಿದ್ದು, 900 ಕ್ಕೂ ಹೆಚ್ಚು ಅರ್ಜಿಗಳನ್ನು ಪರಿಶೀಲಿಸಿ, ಸಂಪೂರ್ಣ ಪಾರದರ್ಶಕ ಆಯ್ಕೆ ಪ್ರಕ್ರಿಯೆಯ ಮೂಲಕ ಅರ್ಹ ಪ್ರತಿಭೆಗಳನ್ನು ಗುರುತಿಸಿ ಮಾಡಲಾಗಿರುವ ಈ ನೇಮಕಾತಿ ಪ್ರಕ್ರಿಯೆ ರಾಜ್ಯಕ್ಕೆ ಮಾದರಿಯಾಗಿದೆ. ಈ ವಿನೂತನ ಯೋಜನೆಯ ರೂಪರೇಷೆ, ತರಬೇತಿಯ ಅವಧಿ, ಪಠ್ಯವಸ್ತು ಪ್ರಯೋಗಿಕ ತರಬೇತಿ ಮುಂತಾದವುಗಳನ್ನು ಸಿದ್ಧಪಡಿಸಲು ಮಾರ್ಗದರ್ಶನ ನೀಡಿದ ರಾಯಚೂರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿಯವರ ಕಾರ್ಯತತ್ಪರತೆಯನ್ನು ಆಯುಕ್ತರು ಈ ಸಂದರ್ಭದಲ್ಲಿ ಪ್ರಶಂಸಿಸಿದರು.
ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ರಾಯಚೂರು ಜಿಲ್ಲಾ ಪಂಚಾಯತ ಹಾಗೂ ಕ್ಯಾಷುಟೆಕ್ ನಿರ್ಮಿತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಮತ್ತು ವಿಶ್ವೇಶ್ವರಯ್ಯ ಅಂತಾರಾಷ್ಠ್ರೀಯ ಸೂಪರ್ ತರಬೇತುದಾರರ ಸಂಸ್ಥೆ ಮುದ್ದೇನಹಳ್ಳಿ ಮತ್ತು ಬೆಂಗಳೂರಿನ ಕರ್ನಾಟಕ ರಾಜ್ಯ ನಿರ್ಮಾಣ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾದ ಪ್ರವೇಶಾತಿ ತರಬೇತಿಯಲ್ಲಿ ಇಬ್ಬರು ತಾಂತ್ರಿಕ ಸಂಯೋಜಕರು ಹಾಗೂ ಹದಿನಾಲ್ಕು ಜನ ತಾಂತ್ರಿಕ ಸಹಾಯಕ ಅಭಿಯಂತರರು ಸೇರಿದಂತೆ ಒಟ್ಟು ಹದಿನಾರು ಅಭಿಯಂತರರು ತರಬೇತಿ ಪಡೆದುಕೊಂಡಿದ್ದಾರೆ.
ಗ್ರಾಮೀಣ ಭಾಗದ ಕೂಲಿ ಕಾರ್ಮಿಕರನ್ನು ಬಡತನ ರೇಖೆಯಿಂದ ಮೇಲೆತ್ತುವುದರೊಂದಿಗೆ ಜಲ ಸಂರಕ್ಷಣೆಗಾಗಿ ಕೃಷಿಹೊಂಡ, ಬದು ನಿರ್ಮಾಣ, ಇಂಗು ಗುಂಡಿ, ಟ್ರೆಂಚ ನಿರ್ಮಾಣ, ತೋಟಗಾರಿಕೆ, ಅರಣ್ಯೀಕರಣಕ್ಕಾಗಿ ಸೂಕ್ತ ಆಸ್ತಿಗಳನ್ನು ಸೃಷ್ಟಿಸಲು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಲು ಈ ಅಭಿಯಂತರರುಗಳನ್ನು ಸನ್ನದ್ಧಗೊಳಿಸಲಾಗಿದೆ.
ಕೋವಿಡ್-19 ರ ದುಷ್ಪರಿಣಾಮಕ್ಕೆ ತುತ್ತಾಗಿರುವ ಕಾರ್ಮಿಕ ವರ್ಗದ ತುರ್ತು ನೆರವಿಗೆ ಧಾವಿಸಿ ಅವರಲ್ಲಿ ಚೈತನ್ಯ ತುಂಬಲು ನರೇಗಾ ಯೋಜನೆ ತುಂಬಾ ಸಹಕಾರಿಯಾಗಿದ್ದು ಈಗಾಗಲೇ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿನ ಎಲ್ಲ ಹಂತದ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಸೂಕ್ತ ತರಬೇತಿ ಹೊಂದಿದ ಹೊಸ ತಾಂತ್ರಿಕ ಸಿಬ್ಬಂದಿಯ ಸೇರ್ಪಡೆಯಿಂದ ನರೇಗಾ ಯೋಜನೆಯಡಿ ಇನ್ನೂ ಹೆಚ್ಚಿನ ಕಾಮಗಾರಿಗಳನ್ನು ಕೈಗೊಳ್ಳಲು ಸಹಕಾರಿಯಾಗಲಿದ್ದು ಹೆಚ್ಚು ಹೆಚ್ಚು ಕೂಲಿ ಕಾರ್ಮಿಕರಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ ಎಂದರು.
ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಅನುಷ್ಟಾನಗೊಳ್ಳುತ್ತಿರುವ ಕಾಮಗಾರಿಗಳ ವಿವರ, ನಿಗದಿಗೊಳಿಸಲಾಗಿರುವ ಗುರಿ ಮುಂತಾದವುಗಳ ಬಗ್ಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಿವರಿಸಿ, ನರೇಗಾ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಗ್ರಾಮಭಿವೃದ್ಧಿ ಕಲ್ಪನೆಯಲ್ಲಿ 237 ಅಂಗನವಾಡಿ ಕೇಂದ್ರ, 388 ಶಾಲಾ ಕಂಪೌಂಡ್, 600 ಅಡುಗೆ ಕೋಣೆ, 146 ಗೋಕಟ್ಟೆ, 55 ಕಲ್ಯಾಣಿಗಳ ಜಿರ್ಣೋದ್ಧಾರ, 49 ಗ್ರಾಮ ಪಂಚಾಯತ್ ಕಟ್ಟಡ, 25 ಗ್ರಾಮೀಣ ಗೋದಾಮು, 10 ಸಂತೆಕಟ್ಟೆ, 532 ಮಳೆನೀರು ಕೋಯ್ಲು, ಶಾಲಾ ಶೌಚಾಲಯ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ಮಾಣ ಮುಂತಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಬಾಸ್ಕೇಟ್ ಬಾಲ್ ಮತ್ತು ಬ್ಯಾಡ್ಮಿಂಟನ್ ಮುಂತಾದ ಆಟದ ಮೈದಾನಗಳ ನಿರ್ಮಾಣ ಮಾಡಲು ಕಾಮಗಾರಿ ಸ್ಥಳ ಗುರುತಿಸಿದೆ. ಮಾರ್ಚ್ ಅಂತ್ಯದೊಳಗೆ ಈ ಕಾಮಗಾರಿಗಳನ್ನು ಪೂರ್ಣಗೊಳಿಸುವ ಯೋಜನೆ ಇದೆ ಎಂದು ಅವರು ತಿಳಿಸಿದರು.
ಕ್ಯಾಷುಟೆಕ್ ನಿರ್ಮಿತಿ ಕೇಂದ್ರದ ಕಾರ್ಯ ನಿರ್ವಾಹಕ ಅಧಿಕಾರಿ ಶರಣಬಸಪ್ಪಾ ಪಟ್ಟೇದ ಪ್ರವೇಶಾತಿ ತರಬೇತಿಯ ಸಮಗ್ರ ಮಾಹಿತಿಯನ್ನು ನೀಡಿದರು.
ಪ್ರವೇಶಾತಿ ತರಬೇತಿಯ ರೂಪರೇಷೆ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತು ಹತ್ತು ದಿನಗಳ ತರಬೇತಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಮುಖ್ಯ ತರಬೇತುದಾರ, ಭಾಲಚಂದ್ರ ಜಾಬಶೆಟ್ಟಿ, ವ್ಯವಸ್ಥಾಪಕರು, ವಿಶ್ವೇಶ್ವರಯ್ಯ ಅಂತಾರಾಷ್ಠ್ರೀಯ ಸೂಪರ್ ತರಬೇತುದಾರರ ಸಂಸ್ಥೆ ಮುದ್ದೇನಹಳ್ಳಿ ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ನಿರ್ಮಾಣ ಕೇಂದ್ರದ ನಿರ್ದೇಶಕ ಶ್ರೀನಿವಾಸ್‍ರಾವ್ ಕುಲಕರ್ಣಿ ಆನ್ ಲೈನ್ ವಿಡಿಯೋ ತರಬೇತಿ ಮೂಲಕ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ಪಂಚಾಯತ್ ಪ್ರಭಾರಿ ಉಪಕಾರ್ಯದರ್ಶಿ ಡಾ. ಟಿ. ರೋಣಿ, ಶ್ರೀರಾಮ ರೆಡ್ಡಿ, ಶರಣಬಸವ, ಬಾಬು ರಾಠೋಡ, ಸಹಾಯಕ ಕೃಷಿ ನಿರ್ದೇಶಕ ಸಂದೀಪ, ಕಾರ್ನಿಕ್‍ನ ಮಂಜುಳಾ, ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಉಲ್ಲಾಸ್, ಕಾರ್ಮಿಕ ಅಧಿಕಾರಿ ವೆಂಕಟಸ್ವಾಮಿ, ಅಬ್ದುಲ್ ಕರೀಮ, ಎಸ್.ಎಸ್. ಘಂಟಿ, ವೆಂಕಟೇಶ ಸಿಂಗ ಹಝಾರೆ, ವಿಜಯ ಕುಮಾರ, ಅನಿಲ ಕುಲಕರ್ಣಿ, ಸುರೇಂದ್ರ ಪಾಟೀಲ, ಅಲ್ಟ್ರಾಟೆಕ್‍ನ ನಾಗರಾಜ, ಅಣ್ಣಾರಾವ್, ಚನ್ನರೆಡ್ಡಿ, ಬಸಣ್ಣ, ಸೋಮನಗೌಡ, ಆಲಮ್ ಪಾಷಾ, ಹನುಮನಗೌಡ, ಮೆಹಬೂಬ, ವೀರೇಶ, ಪರ್ವತ ರೆಡ್ಡಿ, ವಿನೋದ ಡಿ ಜೆ., ಸಾಗರ, ಸೈಮನ್, ತಾರಕೇಶ್ವರಿ, ಬಸವರಾಜ ನಾಗೋಲಿ, ರಾಯಚೂರ ಜಿಲ್ಲಾ ನಿರ್ಮಿತಿ ಕೇಂದ್ರದ ಕೃಷ್ಣಾ ಮತ್ತು ವೆಂಕಟೇಶ.ಪಿ, ವಿಶ್ವನಾಥ ಜಿ, ಧನರಾಜ, ಥಾಮಸ್ ಮುಂತಾದವರನ್ನು ಅಭಿನಂದಿಸಲಾಯಿತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button