ಚಾಮರಾಜನಗರ.ಜ.12:- ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಎಸ್ಸೆಸ್ಸೆಲ್ಸಿ ತರಗತಿಗಳಿಗೆ ಯಾವೆಲ್ಲ ಪಠ್ಯಗಳನ್ನು ಕಡಿತಗೊಳಿಸಬೇಕು ಎಂಬ ಬಗ್ಗೆ ತೀರ್ಮಾನಿಸಿದ್ದೇವೆ. ಕನಿಷ್ಠ ಶೇಕಡ 30ರಷ್ಟು ಪಠ್ಯ ಕಡಿತವಾಗಲಿದೆ. ಯಾರೂ ಆತಂಕಪಡಬೇಕಾಗಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಮಂಗಳವಾರ ಹೇಳಿದರು.
ತಾಲ್ಲೂಕಿನ ವಿವಿಧ ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಪಠ್ಯ ಕಡಿತಕ್ಕೆ ಸಂಬಂಧಿಸಿದ ಆದೇಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮಂಗಳವಾರ ಸಂಜೆ ಅಥವಾ ಬುಧವಾರ ಹೊರಡಿಸಲಿದ್ದಾರೆ’ ಎಂದರು.
1ನೇ ತರಗತಿಯಿಂದ 9ನೇ ತರಗತಿವರೆಗೆ ಹಾಗೂ ಪ್ರಥಮ ಪಿಯುಸಿ ತರಗತಿಗಳನ್ನು ಆರಂಭಿಸುವ ಬಗ್ಗೆ ಜನವರಿ 15ರ ನಂತರ ತೀರ್ಮಾನಿಸಲಾಗುವುದು ಎಂದರು.
8, 9 ಮತ್ತು ಪ್ರಥಮ ಪಿಯುಸಿ ಮಕ್ಕಳಿಗೆ ತರಗತಿಗಳನ್ನು ಆರಂಭಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಇದಕ್ಕಾಗಿ ಸಾಕಷ್ಟು ಕೊಠಡಿಗಳ ಲಭ್ಯತೆ ಇರಬೇಕು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ತಜ್ಞರ ಸಮಿತಿಯ ಜೊತೆ ಚರ್ಚಿಸಲಾಗುವುದು. ಸಮಿತಿಯ ಅಭಿಪ್ರಾಯದ ಮೇಲೆ 15ರ ನಂತರ ತೀರ್ಮಾನಿಸಲಾಗುವುದು ಎಂದರು.