
ಬಸವಕಲ್ಯಾಣ: ಶರಣು ಸಲಗರ್ ಅಚ್ಚರಿಯ, ಆಕಸ್ಮಿಕ ಆಯ್ಕೆ ಅಲ್ಲ..
ಬೀದರ್: ಬಸವಕಲ್ಯಾಣ ಉಪಚುನಾವಣೆಯಲ್ಲಿ ಶರಣು ಸಲಗರ್ ಅವರನ್ನು ಕಣಕ್ಕಿಳಿಸುವ ಬಿಜೆಪಿ ನಾಯಕತ್ವದ ತೀರ್ಮಾನ ಎಲ್ಲರನ್ನು ಅಚ್ಚರಿಗೊಳಿಸಿದೆ. ಆದರೆ, ಇದೇನು ತರಾತುರಿಯಲ್ಲಿ ಕೈಗೊಂಡ ತೀರ್ಮಾನ ಅಲ್ಲ. ಈ ತೀರ್ಮಾನದ ಹಿಂದೆ ಅಧ್ಯಯನ ಇದೆ, ಕ್ಷೇತ್ರದ ಮತದಾರರ ಆಪೇಕ್ಷೆ ಇದೆ. ವ್ಯಕ್ತಿತ್ವ, ಕೊಡುಗೆ, ಪಕ್ಷನಿಷ್ಠೆ, ಜನಸೇವೆಗಳೂ ಇವೆ. ಎಲ್ಲವನ್ನೂ ಅಳೆದೂತೂಗಿ ನೋಡಿಯೇ ವರಿಷ್ಠರು ತೀರ್ಮಾನ ಕೈಗೊಂಡಿದ್ದಾರೆ ಎನ್ನುತ್ತಾರೆ, ಬಿಜೆಪಿಯ ಹಿರಿಯ ನಾಯಕರೊಬ್ಬರು.
ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಜಿಪಂ ಸದಸ್ಯ ಗುಂಡೂರೆಡ್ಡಿ, ಮುಖಂಡ ಶರಣು ಸಲಗರ್ ಹೀಗೆ ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದ ಪಟ್ಟಿಯಲ್ಲಿ ವರಿಷ್ಠರ ನೆಚ್ಚಿನ ಆಯ್ಕೆ ಆದವರು ಶರಣು ಸಲಗರ್.
ಪದಾಧಿಕಾರಿ ನೇಮಕ ಆಗಿರಲಿ, ಅಥವ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿರಲಿ. ಬಿಜೆಪಿ ನಾಯಕತ್ವವು ಎಲ್ಲ ಸಂಗತಿಗಳನ್ನು ಬಹುಸೂಕ್ಷö್ಮವಾಗಿ ಪರಿಶೀಲಿಸುತ್ತದೆ. ಭವಿಷ್ಯದಲ್ಲಿ ಆಗಬಹುದಾದ ಅನುಕೂಲಗಳ ಕುರಿತೂ ಚಿಂತನೆ ನಡೆಸುತ್ತದೆ. ವರ್ತಮಾನದ ಜೊತೆಗೆ ಭವಿಷ್ಯದಲ್ಲಿನ ಅನುಕೂಲಗಳಿಗೆ ಬಿಜೆಪಿ ನಾಯಕತ್ವ ಹೆಚ್ಚು ಮಹತ್ವ ನೀಡುತ್ತದೆ. ಇದರ ಜೊತೆಗೆ ಆಕಾಂಕ್ಷಿಗಳ ಪಕ್ಷ ನಿಷ್ಠೆ, ಪಕ್ಷ ಸಂಘಟನೆಗೆ ನೀಡಿದ ಕೊಡುಗೆ ಹಾಗೂ ಜನಸೇವೆ. ಸಮಾಜದ ವಿವಿಧ ವರ್ಗಗಳಲ್ಲಿ ಆಕಾಂಕ್ಷಿಗಳ ಬಗ್ಗೆ ಇರುವ ಅಭಿಪ್ರಾಯವನ್ನೂ ಸಂಗ್ರಹಿಸಲಾಗುತ್ತದೆ. ಇವೆಲ್ಲ ಆಂತರಿಕವಾಗಿ ನಡೆಯುವ ಚಟುವಟಿಕೆಗಳು. ಮುಖಂಡರ ಗಮನಕ್ಕೂ ಬರುವುದಿಲ್ಲ.
ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹಿಂದೆ ಜೆಡಿಎಸ್ನಲ್ಲಿದ್ದವರು. ಕಳೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರಿ ಟಿಕೆಟ್ ಪಡೆದು ಸ್ಪರ್ಧಿಸಿದರು. ಚುನಾವಣೆಯಲ್ಲಿ ಪರಾಭವಗೊಂಡರು. ಆದರೆ, ನಂತರದ ದಿನಗಳಲ್ಲಿ ಅವರು ಪಕ್ಷದ ವೇದಿಕೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ಸಂಘಟನೆಯ ವಿಷಯದಲ್ಲೂ ಹಿಂದೆ ಬಿದ್ದಿದ್ದರು. ಮುಖ್ಯವಾಗಿ ಕೋವಿಡ್ ಸಂದರ್ಭದಲ್ಲಿ ಜನರಿಗೆ ನೆರವಾಗುವ ವಿಷಯದಲ್ಲಿ ಆಸಕ್ತಿ ತೋರಿರಲಿಲ್ಲ ಎಂಬ ಆರೋಪ ಅವರ ಮೇಲಿದೆ.
ಕೋವಿಡ್ ಸಂದರ್ಭದಲ್ಲಿ ಬಿಜೆಪಿಯು ಸೇವಾ ಹೀ ಸಂಘಟನ್ ಹೈ ಎಂಬ ಅಭಿಯಾನ ನಡೆಸಿತ್ತು. ಕಷ್ಟದಲ್ಲಿದ್ದ ಜನರಿಗೆ ಯಾವ ಯಾವ ಮುಖಂಡರು ನೆರವಾಗುತ್ತಿದ್ದಾರೆ ಎನ್ನುವುದರ ಮೇಲೆ ಸೂಕ್ಷö್ಮವಾಗಿ ನಿಗಾ ಇಟ್ಟಿತ್ತು. ಕೋವಿಡ್ ಸಂದರ್ಭದಲ್ಲಿ ಅತೀ ಹೆಚ್ಚು ಜನರಿಗೆ ನೆರವಾದವರು ಶರಣು ಸಲಗರ್. ಇಲ್ಲೂ ಮಲ್ಲಿಕಾರ್ಜುನ ಖೂಬಾ ಹಿಂದೆ ಬಿದ್ದಿದ್ದರು.
ಪಕ್ಷದಿಂದ ನಡೆದ ಆಂತರಿಕ ಸರ್ವೆ, ಜನಾಭಿಪ್ರಾಯ ಸಂಗ್ರಹದ ವೇಳೆಯಲ್ಲೂ ಕ್ಷೇತ್ರದ ಮತದಾರರು ಹೊಸ ಮುಖ ಇದ್ದರೆ ಚೆನ್ನ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ಪಕ್ಷದ ನಾಯಕತ್ವವು ಮಲ್ಲಿಕಾರ್ಜುನ ಖೂಬಾ ಅವರ ಬಗ್ಗೆ ಆಸಕ್ತಿ ತೋರಲಿಲ್ಲ. ಮತ್ತೊಬ್ಬ ಆಕಾಂಕ್ಷಿ ಸೂರ್ಯಕಾಂತ್ ನಾಗಮಾರಪಳ್ಳಿ ಹಿಂದೆಯೇ ಎರಡು ಬಾರಿ ಬೀದರ್ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಹೀಗಾಗಿ ಅವರ ಹೆಸರನ್ನೂ ಪರಿಗಣಿಸುವ ಸಾಧ್ಯತೆ ಇದ್ದಿರಲಿಲ್ಲ. ನಾಯಕತ್ವಕ್ಕೆ ನೆಚ್ಚಿನ ಆಯ್ಕೆ ಆಗಿ ಕಂಡವರು ಶರಣು ಸಲಗರ್.
ಈಚೆಗೆ ಬಸವಕಲ್ಯಾಣದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕೆಲ ಆಕಾಂಕ್ಷಿಗಳು ನಡೆದುಕೊಂಡ ರೀತಿಯು ವರಿಷ್ಠರಿಗೆ ಬೇಸರವುಂಟು ಮಾಡಿತ್ತು. ಕರೆದ ನಂತರವೂ ವೇದಿಕೆಗೆ ಬರದೆ ಮಾಧ್ಯಮಗಳ ಎದುರು ಮುಜುಗರ ಆಗುವಂತೆ ನಡೆದುಕೊಂಡಿದ್ದು ಪಕ್ಷದ ನಾಯಕತ್ವಕ್ಕೆ ಪಥ್ಯವಾಗಲಿಲ್ಲ ಎನ್ನುತ್ತಾರೆ, ಮುಖಂಡರೊಬ್ಬರು.
ಸ್ಥಳೀಯ ಮುಖಂಡರ ಅಭಿಪ್ರಾಯಗಳಿಗೆ ಇತರ ಪಕ್ಷಗಳಂತೆ ಬಿಜೆಪಿಯೂ ಮನ್ನಣೆ ನೀಡುತ್ತದೆ. ಆದರೆ, ತೀರ್ಮಾನ ಕೈಗೊಳ್ಳುವಾಗ ಮುಖಂಡರ ಅಭಿಪ್ರಾಯಕ್ಕಿಂತ ಪಕ್ಷವೇ ಮುಖ್ಯವಾಗುತ್ತದೆ. ಪಕ್ಷಕ್ಕೆ ಅನುಕೂಲವಾಗುತ್ತದೆ ಎನ್ನುವುದು ಮನದಟ್ಟಾದರೆ, ಸ್ಥಳೀಯ ಮುಖಂಡರ, ಅಭಿಪ್ರಾಯ, ಅಪಸ್ವರ ಮುಖ್ಯವಾಗುವುದಿಲ್ಲ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಮಲ್ಲಿಕಾರ್ಜುನ ಖೂಬಾ ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಲ್ಲಿ ಶರಣು ಸಲಗರ್ ಅಥವಾ ಇತರ ಯಾರೇ ನಾಯಕರಿಗೆ ಬಸವಕಲ್ಯಾಣ ಕ್ಷೇತ್ರದ ನೇತೃತ್ವ ವಹಿಸಿಕೊಳ್ಳುವ ಅವಕಾಶವೇ ಸಿಗುತ್ತಿರಲಿಲ್ಲ.
ಮಲ್ಲಿಕಾರ್ಜುನ ಖೂಬಾ ಅವರು ಕಲ್ಯಾಣದಿಂದ, ಬಿಜೆಪಿ ಕಾರ್ಯ ಚಟುವಟಿಕೆಗಳಿಂದ ದೂರವಾಗಿದ್ದರಿಂದ ನಾಯಕತ್ವದ ಕುರ್ಚಿ ಖಾಲಿಯಾಗಿತ್ತು. ಶರಣು ಸಲಗರ್ ಈ ಸಂಗತಿಯನ್ನು ಬಹುಬೇಗ ಅರಿತುಕೊಂಡರು. ನಂತರ ಎಲ್ಲವೂ ಅವರು ಅಂದುಕೊAಡ ರೀತಿಯಲ್ಲಿಯೇ ನಡೆಯಿತು ಎನ್ನುತ್ತಾರೆ, ದೀರ್ಘ ಕಾಲದಿಂದ ಬಿಜೆಪಿಯಲ್ಲಿರುವ ಮುಖಂಡರೊಬ್ಬರು.




