ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ

ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯವಾಗಿದೆ ಎಂದು ನೂತನ ಕೇಂದ್ರ ಸಚಿವ ಹಾಗೂ ಬೀದರ್ ಸಂಸದ ಭಗವಂತ್ ಖೂಬಾ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾ ಸಂದರ್ಶನದಲ್ಲಿ ಮಾತನಾಡಿದ ಖೂಬಾ, ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ, ಅಭಿವೃದ್ಧಿ ಕಾರ್ಯ ಹಾಗೂ ಮುಂದಿನ ಯೋಜನೆಗಳು, ಎದುರಾಗುವ ಸವಾಲುಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಬೀದರ್ ಸಂಸದನಾಗಿ ಕಳೆದ ಏಳು ವರ್ಷಗಳಿಂದ ನಾನು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಕೇಂದ್ರದ ಸಾಕಷ್ಟು ಜನ ಸ್ನೇಹಿ ಯೋಜನೆಗಳು ಮತ್ತು ಕಾರ್ಯಕ್ರಮಗಳು, ವಿಶೇಷವಾಗಿ ಫಸಲ್ ಭೀಮಾ, ಉಜ್ವಲ್, ಆಯುಷ್ಮಾನ್ ಭಾರತ್ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದೇನೆ. ಕ್ಷೇತ್ರದಲ್ಲಿ ಬಿಜೆಪಿ ಬಲ ಹೆಚ್ಚಿಸಲು ಶ್ರಮಿಸಿದ್ದೇನೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಯಾವುದೇ ಬೆಳವಣಿಗೆಗಳಿಗೂ ಅವಕಾಶ ಮಾಡಿಕೊಟ್ಟಿರಲಿಲ್ಲ ಎಂದು ಖೂಬಾ ಹೇಳಿದರು.
ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಳ್ಳುತ್ತೇನೆಂಬ ನಿರೀಕ್ಷೆ ಇರಲಿಲ್ಲ. ಆದರೆ, ಪಕ್ಷದ ನಾಯಕ ಮತ್ತು ಸಂಸದನಾಗಿ ನಾನು ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ ರೀತಿಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಕೇಂದ್ರ ಸಚಿವನಾಗುವ ಭರವಸೆಗಳಿತ್ತು. ದೇಶದಾದ್ಯಂತ ಮೋದಿ ಸರ್ಕಾರದ ಒಂದು ನೆಟ್‌ವರ್ಕ್ ಇದ್ದು, ಇದು ಪಕ್ಷದ ನಾಯಕರ ಕಾರ್ಯಕ್ಷಮತೆಯನ್ನು ಮೋದಿಯವರ ಗಮನಕ್ಕೆ ತರುತ್ತಿದೆ. ಸಮಾಜಕ್ಕಾಗಿ ನಾವು ಮಾಡುತ್ತಿರುವ ಕೆಲಸಗಳನ್ನು ಈ ನೆಟ್ ವರ್ಕ್ ಗಮನಿಸುತ್ತಿದೆ. ಕೇಂದ್ರ ಸಚಿವ ಸ್ಥಾನಕ್ಕಾಗಿ ಅಥವಾ ಇತರೆ ಯಾವುದೇ ಸ್ಥಾನಕ್ಕಾಗಿ ಲಾಬಿ ಮಾಡುವುದು ಬಿಜೆಪಿಯಲ್ಲಿ ಎಂದಿಗೂ ಕೆಲಸ ಮಾಡುವುದಿಲ್ಲ ಎಂಬುದು ಇದೀಗ ಸ್ಪಷ್ಟವಾಗಿದೆ. ಪಕ್ಷದಲ್ಲಿ ಪ್ರತೀಯೊಂದಕ್ಕೂ ಒಂದೊAದು ಅರ್ಹತೆ ನೀಡಲಾಗಿದೆ ಎಂದು ಖೂಬಾ ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾವುದೇ ಪ್ರಮುಖ ಯೋಜನೆಗಳಾಗಲಿ ಅಥವಾ ಬಾಕಿಯಿರುವ ಯಾವುದೇ ಯೋಜನೆಗಳಾಗಲೀ ಇಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಪೂರ್ಣ ಅಭಿವೃದ್ಧಿ ತರುವ ಸಾಮರ್ಥ್ಯ ರಾಜ್ಯ ಸರ್ಕಾರಕ್ಕಿದೆ. ಈ ಭಾಗದಲ್ಲಿ ಕಾಂಗ್ರೆಸ್ ಕಳೆದ 70 ವರ್ಷಗಳಿಂದ ಕೇವಲ ನಕಲಿ ಭರವಸೆಗಳನ್ನು ನೀಡಿರುವುದು ಬಿಟ್ಟರೆ ಬೇರನನ್ನೂ ಮಾಡದಿರುವುದು ದುರಾದೃಷ್ಟಕರ ಸಂಗತಿ. ಸಚಿವ ಸ್ಥಾನವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದು, ದೇಶದ ಎಲ್ಲಾ ಪ್ರದೇಶಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದರು.

ಎರಡು ಖಾತೆಗಳ ಜವಾಬ್ದಾರಿಯನ್ನು ಪ್ರಧಾನಿ ಮೋದಿಯವರು ನೀಡಿದ್ದಾರೆ. ದೇಶದ ಎಲ್ಲಾ ಭಾಗಗಳಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುವತ್ತ ನಾನು ಗಮನ ಹರಿಸಬೇಕಾಗಿದೆ. ಕೇಂದ್ರವು ಎಲ್ಲಾ ರಾಜ್ಯಗಳೊಂದಿಗೆ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಎಲ್ಲಾ ರಾಜ್ಯಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಕರ್ನಾಟಕ ರಾಜ್ಯಕ್ಕೂ ಅರ್ಹವಾದದ್ದನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಖೂಬಾ, ರಾಜಕೀಯಕ್ಕಿಂತ ಹೆಚ್ಚಾಗಿ ನನ್ನ ಇಲಾಖೆಗಳಿಗೆ ಹಂಚಿಕೆಯಾದ ಅನುದಾನವನ್ನು ಬಳಕೆ ಮಾಡುವುದರತ್ತ ನಾನು ಹೆಚ್ಚಿನ ಗಮನ ಹರಿಸುತ್ತೇನೆ ಎಂದರು. ನನ್ನ ಮೇಲೆ ಸಾಕಷ್ಟು ಜವಾಬ್ದಾರಿಯಿದೆ. ಮೊದಲು ನಾನು ನನ್ನ ಕರ್ತವ್ಯವನ್ನು ಪೂರ್ಣಗೊಳಿಸಬೇಕು ಎಂದು ಹೇಳಿದ್ದಾರೆ.

Latest Indian news

Popular Stories