ರಾಜಭವನಕ್ಕೂ ಬಂದ ಬಾಂಬ್ ಬೆದರಿಕೆ ಕರೆ: ಸ್ಥಳಕ್ಕೆ ಪೊಲೀಸರ ದೌಡು, ತನಿಖೆ ಚುರುಕು

ಬೆಂಗಳೂರು: ಬೆಂಗಳೂರಿನ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು ನಿಗೂಢ ತಾಣದಿಂದ ಈಮೇಲ್‌ ಮಾಡಿ ಭಾರಿ ಆತಂಕಕ್ಕೆ ಕಾರಣವಾದ ಘಟನೆ ಬೆನ್ನಲ್ಲೇ ಇದೀಗ ರಾಜ್ಯದ ಶಕ್ತಿ ಕೇಂದ್ರಗಳಲ್ಲಿ ಒಂದಾದ ರಾಜ ಭವನಕ್ಕೂ ಬಾಂಬ್‌ ಬೆದರಿಕೆ ಕರೆ ಬಂದಿದೆ.

ರಾಜಭವನದಲ್ಲಿ ಬಾಂಬ್ ಇಡಲಾಗಿದೆ ಎಂದು ಸೋಮವಾರ ರಾತ್ರಿ ಕರೆ ಮಾಡಿ ತಿಳಿಸಲಾಗಿದೆ. ರಾತ್ರಿ 11.30ರ ಸುಮಾರಿಗೆ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ವ್ಯಕ್ತಿಯೊಬ್ಬ ಹೇಳಿದ್ದಾನೆಂದು ತಿಳಿದುಬಂದಿದೆ.

ಬೆದರಿಕೆ ಕರೆ ಬಂದ ಕೂಡಲೇ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿದ್ದು, ಕೂಡಲೇ ಪೊಲೀಸರು ಬಾಂಬ್‌ ಸ್ಕ್ವಾಡ್‌ ಮತ್ತು ಡಾಗ್‌ ಸ್ಕ್ವಾಡ್‌ನೊಂದಿಗೆ ಅಲ್ಲಿಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ರಾಜಭವನಕ್ಕೆ ಹೋಗಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಸದ್ಯಕ್ಕೆ ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಕ್ಕಿಲ್ಲ. ಆದರೆ, ಸ್ಥಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ರಾಜಭವನ ಸ್ಥಳ ವಿಶಾಲವಾದ ಜಾಗವಾಗಿದ್ದು, ಯಾವ ಭಾಗದಲ್ಲಿ ಇಡಲಾಗಿದೆ ಎಂಬ ಮಾಹಿತಿಯನ್ನು ವ್ಯಕ್ತಿ ನೀಡಿಲ್ಲ. ಈ ನಡುವೆ, ರಾಜಭವನಕ್ಕೆ ಯಾವ ನಂಬರ್‌ನಿಂದ ಕರೆ ಮಾಡಲಾಗಿದೆ. ಕರೆ ಮಾಡಿದ ವ್ಯಕ್ತಿ ಯಾರು ಎಂಬ ವಿಚಾರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆದರಿಕೆ ಕರೆ ಬೆನ್ನಲ್ಲೇ ರಾಜಭವನದ ಬಳಿ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ರಾಜಭವನದಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಪರಿಶೀಲನೆ ನಡೆಸಿ ಒಳಗಡೆ ಕಳುಹಿಸಲಾಗುತ್ತಿದೆ.

ಇತ್ತೀಚೆಗಷ್ಟೇ ಇದೇ ರೀತಿಯ ಬಾಂಬ್ ಬೆದರಿಕೆ ಕರೆ ಬೆಂಗಳೂರಿನಾದ್ಯಂತ ಸುಮಾರು 44 ಶಾಲೆಗಳಿಗೆ ಅನಾಮಧೇಯ ಇಮೇಲ್‌ಗಳ ಮೂಲಕ ಬಂದಿತ್ತು. ಈ ಘಟನೆ ನಡೆದು 10 ದಿನಗಳು ಕೂಡ ಕಳೆದಿಲ್ಲ, ಅಷ್ಟರೊಳಗೆ ಇದೇ ರೀತಿಯ ಮತ್ತೊಂದು ಬೆದರಿಕೆ ಕರೆ ಮುನ್ನೆಲೆಗೆ ಬಂದಿದೆ.

Latest Indian news

Popular Stories