
ತಿರುಪತಿ -ಕಲಬುರಗಿ ವಿಮಾನ ಆರಂಭ
ಕಲಬುರಗಿ, 11: ಪ್ರಸಿದ್ಧ ಯಾತ್ರಾ ಸ್ಥಳ ತಿರುಪತಿ ಮತ್ತು ಕಲಬುರಗಿ ನಡುವೆ ‘ಸ್ಟಾರ್ ಏರ್’ ಸಂಸ್ಥೆ ಸೋಮವಾರ ನೇರ ವಿಮಾನ ಸೇವೆ ಆರಂಭಿಸುವುದರೊಂದಿಗೆ ಈ ಭಾಗದ ಬಹುದಿನಗಳ ಕನಸು ಈಡೇರಿದೆ.
ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ವಿಮಾನ ಸೇವೆ ಲಭ್ಯವಿರಲಿದೆ. ವಿಮಾನ ಈ ದಿನಗಳಂದು ಕಲಬುರಗಿ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 9.55 ಕ್ಕೆ ಹೊರಟು ಅಂದೇ ಬೆಳಿಗ್ಗೆ 11.00 ಕ್ಕೆ ತಿರುಪತಿ ವಿಮಾನ ನಿಲ್ದಾಣ ತಲುಪಲಿದೆ. ವಾಪಸ್ ಮಾರ್ಗದಲ್ಲಿ ತಿರುಪತಿಯಿಂದ ಮಧ್ಯಾಹ್ನ 2.25 ಕ್ಕೆ ಹೊರಟು ಮಧ್ಯಾಹ್ನ 3.30ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.
ಹೊಸ ಸೇವೆಯ ಆರಂಭದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಬೋಡಿರ್ಂಗ್ ಪಾಸ್ ನೀಡಿದ ನಂತರ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಮಾತನಾಡಿ, ಕಲಬುರಗಿ ವಿಮಾನ ಉದ್ಘಾಟನೆಯಾದ ಕೇವಲ ಒಂದು ವರ್ಷದಲ್ಲಿ ಇದು ದೇಶದ ಸಕ್ರಿಯ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ರಾಜ್ಯದ ಕಲಬುರಗಿ, ವಿಜಯಪುರ, ಯಾದಗಿರಿ, ಬೀದರ್, ಬಾಗಲಕೋಟೆ ಮತ್ತು ರಾಯಚೂರು ಜಿಲ್ಲೆಗಳ ಜನರು ಹೊಸ ವಿಮಾನ ಸೇವೆ ಬಳಸಿಕೊಳ್ಳುವ ನಿರೀಕ್ಷೆಯಿದೆ. ಪ್ರತಿವರ್ಷ ಸಾವಿರಾರು ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಕಲಬುರಗಿಯಿಂದ ತಿರುಪತಿಗೆ ಪ್ರವಾಸ ಕೈಗೊಳ್ಳುತ್ತಿದ್ದು, ಈ ವಿಮಾನ ಸೇವೆಯಿಂದ ಯಾವುದೇ ತೊಂದರೆಯಿಲ್ಲದೆ ಆರಾಮದಾಯಕವಾಗಿ ಬೇಗನೆ ಪ್ರಯಾಣಿಸಬಹುದಾಗಿದೆ ಎಂದು ಅವರು ಹೇಳಿದರು.




