ವೃದ್ಧೆ ನಾಪತ್ತೆ
ಉಡುಪಿ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಂಚಿಕೋಡಿ ನಿವಾಸಿ ಜಯಲಕ್ಷ್ಮೀ (65) ಎಂಬ ವೃದ್ಧೆಯು 2024 ರ ಆಗಸ್ಟ್ 30 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.
5 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಮಾನ್ಯ ಶರೀರ ಹೊಂದಿದ್ದು, ಕನ್ನಡ, ಕೊಂಕಣಿ ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ.
ಉಡುಪಿ ಲೋಕಾಯುಕ್ತ ವತಿಯಿಂದ ಸಾರ್ವಜನಿಕ ಅಹವಾಲು- ಜನ ಸಂಪರ್ಕ ಸಭೆ
ಉಡುಪಿ: ಉಡುಪಿ ಲೋಕಾಯುಕ್ತ ವಿಭಾಗದ ವತಿಯಿಂದ ಜಿಲ್ಲಾ ಲೋಕಾಯುಕ್ತ ವಿಭಾಗದ ಪೊಲೀಸ್ ಉಪಾಧೀಕ್ಷಕರು ಹಾಗೂ ನಿರೀಕ್ಷಕರು ಮತ್ತು ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರು ಫೆಬ್ರವರಿ 13 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ರ ವರೆಗೆ ಬೈಂದೂರು ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಮತ್ತು ಲೋಕಾಯುಕ್ತ ಜನಸಂಪರ್ಕ ಸಭೆ ನಡೆಸಲಿದ್ದಾರೆ.
ಉಳಿದ ದಿನಗಳಲ್ಲಿಯೂ ಸಹ ಸಾರ್ವಜನಿಕರು ಅಹವಾಲುಗಳಿದ್ದಲ್ಲಿ ಉಡುಪಿ ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರು ದೂ.ಸಂಖ್ಯೆ: 0820-2958881, ಮೊ.ನಂ: 9364062581, ಪೊಲೀಸ್ ನಿರೀಕ್ಷಕರು-1 ದೂ.ಸಂಖ್ಯೆ: 0820-2536661, ಮೊ.ನಂ: 9364062695 ಹಾಗೂ ಪೊಲೀಸ್ ನಿರೀಕ್ಷಕರು-2 ಮೊ.ನಂ: 9364062696 ಅಥವಾ ಅರ್ಜಿದಾರರು ನಮೂನೆ 1 ಮತ್ತು 2 ರಲ್ಲಿ ಭರ್ತಿ ಮಾಡಿ, ಅಫಿಡವಿಟ್ ಮಾಡಿ ಸಲ್ಲಿಸಿದ ಅರ್ಜಿಗಳನ್ನು ಉಡುಪಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರ ಕಚೇರಿಗೆ ಅಥವಾ ನಿಬಂಧಕರು, ಕರ್ನಾಟಕ ಲೋಕಾಯುಕ್ತ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್ ಅಂಬೇಡ್ಕರ್ ವೀಥಿ, ಬೆಂಗಳೂರು ಇಲ್ಲಿಗೆ ಸಲ್ಲಿಸಬಹುದಾಗಿದೆ. ಸರಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ ಹಾಗೂ ನೌಕರರ ವಿರುದ್ಧವೂ ಸಹ ಸಾರ್ವಜನಿಕರು ದೂರು ನೀಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಫೆ.11ರಂದು ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ
ಉಡುಪಿ: 110/11ಕೆ.ವಿ ವಿದ್ಯುತ್ ಉಪಕೇಂದ್ರ ಹಿರಿಯಡ್ಕದಲ್ಲಿ 110 ಕೆ.ವಿ ಬಸ್‌ಬಾರ್ ಶಕ್ತಿ ಪರಿವರ್ತಕಗಳ ಮತ್ತು ಇದಕ್ಕೆ ಸಂಬಂಧಿಸಿದ ಉಪಕರಣಗಳ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಮೆಸ್ಕಾಂ ಇಲಾಖೆಯಿಂದ ಫೆಬ್ರವರಿ 11 ರಂದು ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ ಹಮ್ಮಿಕೊಂಡಿರುವ ಹಿನ್ನೆಲೆ, ಸದರಿ ದಿನದಂದು ಬಜೆ ರೇಚಕ ಸ್ಥಾವರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿರುವುದರಿಂದ, ಉಡುಪಿ ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರಿನ ಸರಬರಾಜು ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದರಿಂದ ಕ್ಯಾನ್ಸರ್ ತಡೆಗಟ್ಟಲು ಸಾಧ್ಯ: ಡಿ.ಹೆಚ್.ಓ ಡಾ. ನಾಗರತ್ನ
ಉಡುಪಿ: ಕ್ಯಾನ್ಸರ್ ಕಾಯಿಲೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಹಾಗೂ ಅದರ ತಡೆಗಟ್ಟುವಿಕೆ, ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತಿದ್ದು, ಕ್ಯಾನ್ಸರ್‌ನಿಂದ ಉಂಟಾಗುವ ಅನಾರೋಗ್ಯ ಮತ್ತು ಸಾವುಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುವುದು ಈ ದಿನದ ಪ್ರಾಥಮಿಕ ಗುರಿಯಾಗಿದೆ ಎಂದು ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗರತ್ನ ಹೇಳಿದರು.
ಅವರು ಇಂದು ನಗರದ ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಸರ್ವೇಕ್ಷಣಾ ಘಟಕ ಎನ್.ಸಿ.ಡಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ಜಿಲ್ಲಾ ಆಸ್ಪತ್ರೆ ಎನ್.ಸಿ.ಡಿ ವಿಭಾಗ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಹಾಗೂ ಅಪ್ಪು ಅಭಿಮಾನಿಗಳ ಬಳಗ ಉಡುಪಿ ಇವರ ಸಹಯೋಗದೊಂದಿಗೆ ನಡೆದ ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕ್ಯಾನ್ಸರ್ ಕಾಯಿಲೆಯು ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಮಾರಕ ರೋಗವಾಗಿದ್ದು, ಯಾವುದೇ ಕ್ಯಾನ್ಸರ್ ಆದರೂ ಆರಂಭಿಕ ಹಂತದಲ್ಲಿ ಗುರುತಿಸಿ, ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಪ್ರಾಣಾಪಾಯದಿಂದ ಪಾರಾಗಬಹುದಾಗಿದೆ ಎಂದ ಅವರು, ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು ಕೇವಲ ನಾಮಕಾವಸ್ಥೆಗೆ ಮೀಸಲಾಗಿರದೇ ಅದನ್ನು ಪರಿಣಾಮಕಾರಿಯಾಗಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಆಶಾಕಾರ್ಯಕರ್ತೆಯರು ಶ್ರಮಿಸಬೇಕು ಎಂದರು. ಜಿಲ್ಲಾ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ವಾಸುದೇವ್ ಪ್ರಾಸ್ತಾವಿಕವಾಗಿ ಮಾತನಾಡಿ, ಆರೋಗ್ಯ ಇಲಾಖೆಯ ವತಿಯಿಂದ ವಿವಿಧ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ದೃಷ್ಠಿಯಿಂದ ವಿವಿಧ ದಿನಾಚರಣೆಗಳನ್ನು ಆಚರಿಸಲಾಗುತ್ತಿದೆ. ಸುಮಾರು ಮೂವತ್ತ ವರ್ಷಗಳ ಹಿಂದೆ ಕ್ಯಾನ್ಸರ್ ಅನ್ನು ಶ್ರೀಮಂತ ರಾಷ್ಟ್ರಗಳ ಕಾಯಿಲೆ ಎಂದು ಭಾವಿಸಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲಿನವರಲ್ಲಿ ಈ ಕಾಯಿಲೆಯನ್ನು ಕಾಣುತ್ತಿದ್ದೇವೆ. ಕ್ಯಾನ್ಸರ್ ಕಾಯಿಲೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದರಿಂದ ಅದನ್ನು ತಡೆಗಟ್ಟಲು ಸಾಧ್ಯ ಎಂದರು. ಕ್ಯಾನ್ಸರ್ ಕಾಯಿಲೆಯು ಚಿಕ್ಕ ಮಕ್ಕಳಲ್ಲಿಯೂ ಕಂಡುಬರುತ್ತಿದ್ದು, ಆಶಾ ಕಾರ್ಯಕರ್ತೆಯರು ಮನೆ ಭೇಟಿ ಸಂದರ್ಭದಲ್ಲಿ ಅರಿವು ಮೂಡಿಸಿದ್ದಲ್ಲಿ ಸಮಾಜದಲ್ಲಿ ಕ್ಯಾನ್ಸರ್ ಕಾಯಿಲೆ ತಡೆಗಟ್ಟಬಹುದಾಗಿದೆ. ಮದ್ಯಪಾನ ಹಾಗೂ ಧೂಮಪಾನದಿಂದ ಪ್ರತಿಯೊಬ್ಬರೂ ದೂರವಿರುವಂತೆ ನೋಡಿಕೊಳ್ಳಬೇಕು. ನಶ್ಯ ಸೇವನೆಯಿಂದಲೂ ಕ್ಯಾನ್ಸರ್ ಬರುವ ಸಾಧ್ಯತೆಗಳಿದ್ದು, ಹಳ್ಳಿಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು ಎಂದ ಅವರು, ಮಕ್ಕಳು ಚಿಕ್ಕಂದಿನಿಂದಲೇ ನಿರಂತರವಾದ ದೈಹಿಕ ಚಟುವಟಿಕೆಗಳನ್ನು ರೂಢಿಸಿಕೊಂಡಾಗ, ಸಮತೋಲನ ಆಹಾರಗಳ ನಿಯಮಿತ ಸೇವನೆಯಿಂದ ಕ್ಯಾನ್ಸರ್ ಕಾಯಿಲೆಯಿಂದ ದೂರ ಉಳಿಯಬಹುದಾಗಿದೆ ಎಂದರು. ಜಿಲ್ಲಾ ಆಸ್ಪತ್ರೆಯ ಹಿರಿಯ ಕ್ಯಾನ್ಸರ್ ತಜ್ಞ ಡಾ. ವೆಂಕಟೇಶ್ ಉಪನ್ಯಾಸ ನೀಡಿ ಮಾತನಾಡಿ, ಕ್ಯಾನ್ಸರ್ ಕಾಯಿಲೆಯ ಬಗ್ಗೆ ನಾಗರಿಕರು ಭಯ ಬಿಡಬೇಕು. ಕ್ಯಾನ್ಸರ್ ಕಾಯಿಲೆಗೆ ಒಳಗಾದವರನ್ನು ಟಾರ್ಗೆಟ್ ಥೆರಫಿ ಚಿಕಿತ್ಸೆಯನ್ನು ನೀಡುವ ಮೂಲಕ ದೀರ್ಘ ಅವಧಿಯವರೆಗೆ ಬದುಕಿಸಿಕೊಳ್ಳುವ ಚಿಂತನೆ ನಡೆಯುತ್ತಿದೆ. ಕ್ಯಾನ್ಸರ್ ರೋಗಿಗಳನ್ನು ಐದು ವರ್ಷಗಳ ಕಾಲ ಫಾಲೋ ಅಪ್ ಮಾಡಿ, ಕಾಯಿಲೆ ಬರದಿದ್ದಲ್ಲಿ ಶೇ. 90 ರಷ್ಟು ಗುಣಮುಖರನ್ನಾಗಿ ಮಾಡಬಹುದು ಎಂದ ಅವರು ಯಾವುದೇ ರೀತಿಯ ಕ್ಯಾನ್ಸರ್ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿರುವ ಸೌಕರ್ಯಗಳನ್ನು ಬಳಸಿಕೊಂಡು ಚಿಕಿತ್ಸೆಯನ್ನು ಸಹ ನೀಡಲಾಗುವುದು ಎಂದರು. ಸ್ತ್ರೀ ರೋಗ ಪ್ರಸೂತಿ ತಜ್ಞ ಡಾ. ಶಶಾಂಕ್ ಕಿಣಿ, ಮಹಿಳೆಯರಲ್ಲಿ ಕಂಡುಬರುವ ಗರ್ಭಕೋಶದ ಬಾಯಿಯ ಕ್ಯಾನ್ಸರ್ ಪತ್ತೆ ಹಚ್ಚುವ ಕುರಿತು, ಅದಕ್ಕೆ ಲಭ್ಯವಿರುವ ಚಿಕಿತ್ಸಾ ವಿಧಾನಗಳನ್ನು ಪಡೆಯುವ ಬಗ್ಗೆ ಮಾಹಿತಿ ನೀಡಿದರು. ಪುಷ್ಪಲತಾ ಅವರು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‌ನಡಿ ಲಭ್ಯವಿರುವ ಚಿಕಿತ್ಸೆ, ಚಿಕಿತ್ಸಾ ಸೌಲಭ್ಯಗಳನ್ನು ಪಡೆಯಲು ಅಗತ್ಯವಿರುವ ದಾಖಲಾತಿ, ಸರಕಾರಿ ಆಸ್ಪತ್ರೆಗಳಲ್ಲಿ ರೆಫರಲ್ ಪಡೆದು ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಕಾರ್ಡ್‌ನಡಿ ಚಿಕಿತ್ಸೆ ಪಡೆಯುವ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಹೆಚ್ ಅಶೋಕ್ ಮಾತನಾಡಿ, ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವುದರೊಂದಿಗೆ ಅವರನ್ನು ಸೂಕ್ತ ರೀತಿಯಲ್ಲಿ ಆರೈಕೆ ಮಾಡಿ, ಅವರ ಮಾನಸಿಕ ಸ್ಥಿತಿಯನ್ನು ಸದೃಢಗೊಳಿಸುವ ಕೆಲಸವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮುತುವರ್ಜಿಯಿಂದ ಮಾಡಬೇಕು ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆದು ಗುಣಮುಖದಾರವರಿಗೆ ಆಹಾರದ ಕಿಟ್‌ಗಳನ್ನು ಹಾಗೂ ನಗದನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಅಧ್ಯಕ್ಷ ಡಾ.ಸುರೇಶ್ ಶೆಣೈ, ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಸುಜಿತ್ ಹಾಗೂ ಡಾ. ಮಂಜುನಾಥ್, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯದ ಗಿರೀಶ್ ಕಡ್ಡಿಪುಡಿ, ಅಪ್ಪು ಅಭಿಯಾನಿ ಬಳಗದ ಪ್ರೀತಮ್ ಬಿ.ಎಸ್, ಎನ್.ಸಿ.ಡಿ ಕಾರ್ಯಕ್ರಮದ ಜಿಲ್ಲಾ ಸಮಾಲೋಚಕಿ ಡಾ. ಅಂಜಲಿ, ಆಪ್ತ ಸಮಾಲೋಚಕ ಮನು, ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ಜಿಲ್ಲೆಯ ವಿವಿಧ ಆರೋಗ್ಯ ಸಂಸ್ಥೆಗಳ ಆಶಾ ಕಾರ್ಯಕರ್ತೆಯರು, ವಿದ್ಯಾರತ್ನ ಕಾಲೇಜು ಆಫ್ ನರ್ಸಿಂಗ್ ಇಲ್ಲಿನ ವಿದ್ಯಾರ್ಥಿಗಳು, ಉಪನ್ಯಾಸಕರುಗಳು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸತೀಶ್ ಸ್ವಾಗತಿಸಿ, ಕ್ಷಯ ಘಟಕದ ಹಿರಿಯ ಆರೋಗ್ಯ ಮೇಲ್ವಿಚಾರಕ ಪ್ರಶಾಂತ್ ಶೆಟ್ಟಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದ ನಂತರ ಆಸ್ಪತ್ರೆಯ ಆವರಣದಲ್ಲಿ ಕ್ಯಾನ್ಸರ್ ಜಾಗೃತಿ ಮತ್ತು ಮಾಹಿತಿ ಕುರಿತ ಜಾಥಾಕ್ಕೆ ಗಾಳಿಯಲ್ಲಿ ಬಲೂನ್ ಹಾರಿಬಿಡುವುದರ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗರತ್ನ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಹೆಚ್ ಅಶೋಕ್ ಚಾಲನೆ ನೀಡಿದರು. ಜಾಥಾವು ಜಿಲ್ಲಾ ಆಸ್ಪತ್ರೆಯ ಆವರಣದಿಂದ ಬ್ರಹ್ಮಗಿರಿಯವರೆಗೂ ನಡೆದಿದ್ದು, ಆಶಾ ಕಾರ್ಯಕರ್ತೆಯರು, ಕಾಲೇಜು ವಿದ್ಯಾರ್ಥಿಗಳು ಕ್ಯಾನ್ಸರ್ ಕಾಯಿಲೆಯು ಕುರಿತು ಜಾಗೃತಿ ಮೂಡಿಸುವ ಕರಪತ್ರಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಿಗೆ ಅರಿವು ಮೂಡಿಸಿದರು