
ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ: ಕಾಯ್ದೆಯಲ್ಲಿ ಅಗತ್ಯ ಮಾರ್ಪಾಡು ಮಾಡಲು ಸಿದ್ಧ; ಯಡಿಯೂರಪ್ಪ
ಬೆಂಗಳೂರು, ಸೆ 28(ಯುಎನ್‍ಐ):- ರೈತರಿಂದಾಗಿಯೇ ತಾವು ಇಂದು ಮುಖ್ಯಮಂತ್ರಿ ಸ್ಥಾನದಲ್ಲಿ ಬಂದು ಕುಳಿತಿದ್ದೇನೆ. ತಮ್ಮಿಂದ ಯಾವ ಕಾರಣಕ್ಕೂ ಅನ್ನದಾತರಿಗೆ ಅನ್ಯಾಯವಾಗುವುದಿಲ್ಲ. ಖುದ್ದು ನಾನೇ ರಾಜ್ಯಾದ್ಯಂತ ಪ್ರವಾಸ ಮಾಡಿ ಕಾಯ್ದೆಯಿಂದ ಆಗುವ ಅನುಕೂಲ ಹಾಗೂ ಕಾಂಗ್ರೆಸ್ ನಾಯಕರ ದ್ವಿಮುಖ ನೀತಿ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಪಿಎಂಸಿ ಕಾಯ್ದೆ ತಿದ್ದುಪಡಿ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ರೈತ ಸಂಘಟನೆಗಳು, ಕಾಂಗ್ರೆಸ್ ನ ಕೆಲವು ಪಿತೂರಿ ನಡೆಸಿ ಧರಣಿ ಸತ್ಯಾಗ್ರಹ, ಬಂದ್ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು..
ರೈತ ಮುಖಂಡರನ್ನು ವಿಧಾನಸೌಧಕ್ಕೆ ಕರೆಸಿ ಈ ಕಾಯ್ದೆಯಿಂದ ಹೇಗೆ ಅನುಕೂಲ ಆಗಲಿದೆ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿದೆ, ಆದರೆ ಅವರು ಬಂದ್ ಮಾಡಲೇಬೇಕು ಎನ್ನುವ ನಿಶ್ಚಯ ಮಾಡಿ ಬಂದಿದ್ದರು, ಈಗ ಬರೀ ಕಾಫಿ ಟೀ ಕೊಟ್ಟು ಕಳಿಸಿದರು ಚರ್ಚೆಗೆ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಬಂದವರಿಗೆ ಕಾಫಿ ಟೀ ಕೊಡಬಾರದಾ? ಚರ್ಚೆಗೆ ಅವಕಾಶ ಕೊಟ್ಟಿದೆ, ಆದರೆ ಅವರು ಏನೂ ಹೇಳಲಿಲ್ಲ ಯಾವ ಸಲಹೆಯನ್ನು ಕೂಡಲಿಲ್ಲ ಹಾಗಾಗಿ ಸಭೆ ವಿಫಲವಾಯಿತು ಎಂದು ಸಮರ್ಥನೆ ನೀಡಿದರು.




