ಬಂಟ್ವಾಳ: ಪೊಲೀಸ್ ಕುಟುಂಬದ ಮಾನಭಂಗಕ್ಕೆ ಯತ್ನ ಆರೋಪ; ಇಬ್ಬರ ಬಂಧನ

ಬಂಟ್ವಾಳ: ಪೊಲೀಸ್ ಕುಟುಂಬದ ಮಾನಭಂಗಕ್ಕೆ ಯತ್ನಿಸಿದಲ್ಲದೆ, ಕರ್ತವ್ಯಕ್ಕೂ ಅಡ್ಡಿಪಡಿಸಿದ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ತುಂಬೆ ನಿವಾಸಿಗಳಾದ ಮನೀಶ್ ಪೂಜಾರಿ ಮತ್ತು ಮಂಜುನಾಥ್ ಆಚಾರ್ಯ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ನಡೆದ ಘಟನೆ ಏನು? ಪೊಲೀಸ್ ಮೇಲೆಯೇ ಸಂಶಯನಾ?

ಬಂಟ್ವಾಳ ಡಿ.ವೈ.ಎಸ್. ಪಿ.ಕಚೇರಿಯ ಸಿಬ್ಬಂದಿ ಪ್ರಸ್ತುತ ಎನ್. ಐ.ಎ.ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕುಮಾರ್ ಎಂಬ ಪೊಲೀಸ್ ಸಿಬ್ಬಂದಿಯ ಕುಟುಂಬದ ಮೇಲೆ ಮಾನಭಂಗಕ್ಕೆ ಯತ್ನ ನಡೆಸಿದ್ದಾರೆ ಎಂದು ಅವರು ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಕುಮಾರ್ ಎಂಬವರು ಎನ್.ಐ.ಎ. ವಿಭಾದ ಒಂದು ಪ್ರಕರಣದ  ಕರ್ತವ್ಯದ ದೃಷ್ಟಿಯಿಂದ ಬಿಸಿರೋಡಿನಲ್ಲಿರುವ ಪೊಲೀಸ್ ವಸತಿಗೃಹದಲ್ಲಿ ತಂಗಿದ್ದರು. ಇತ್ತೀಚಿಗೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಕುಮಾರ್ ಅವರು ಎನ್.ಐ.ಎ.ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಆ ಬಳಿಕ ಪ್ರತಿದಿನ ಬಿಸಿರೋಡಿನ ಪೋಲಿಸ್ ವಸತಿಗೃಹಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಕುಟುಂಬದ ಜೊತೆ ಅಪರೂಪಕ್ಕೆ ಪೊಲೀಸ್ ವಸತಿಗೃಹದಲ್ಲಿ ತಂಗುತ್ತಿದ್ದರು.

ಹೀಗಾಗಿ ಕುಮಾರ್ ಅವರು ಜುಲೈ 27 ರಂದು  ಪತ್ನಿ ಹಾಗೂ ಪತ್ನಿಯ ಅಕ್ಕನ ಜೊತೆ ಬಿಸಿರೋಡಿನ ವಸತಿ ಗೃಹದಲ್ಲಿ ತಂಗಿದ್ದು, ರಾತ್ರಿ ವೇಳೆ ಊಟಕ್ಕೆ ಬಿಸಿರೋಡಿನ ಹೋಟೆಲ್ ಒಂದಕ್ಕೆ ನಡೆದುಕೊಂಡು ಹೋಗಿ ಊಟ ಮುಗಿಸಿ ವಾಪಸ್ ಬರುವ ವೇಳೆ ರಾಜೇಶ್ ವೈನ್ ನ ಮುಂಭಾಗದಲ್ಲಿ ನಿಂತುಕೊಂಡಿದ್ದ ಇಬ್ಬರು ಯುವಕರು ಪೊಲೀಸ್ ಕುಮಾರ್ ಅವರ ಕುಟುಂಬವನ್ನು ಹಿಂಬಾಲಿಸಿಕೊಂಡು ಬರುತ್ತಿದ್ದರು.

ಕುಮಾರ್ ಕುಟುಂಬವನ್ನು ಮನೆಗೆ ಮುಟ್ಟಿಸಿ ಬಳಿಕ ಕೇಸ್ ಒಂದರ ವಿಚಾರಕ್ಕೆ ಎಸ್.ಐ.ಅವರ ಅದೇಶದಂತೆ‌ ಮನೆಯಿಂದ ಹೊರಬರುತ್ತಿದ್ದಂತೆ ಕುಮಾರ್ ಅವರಿಗೆ ಮನೆಯಂಗಳದಲ್ಲಿ ನಿಂತಿದ್ದ ಇಬ್ಬರು ಆರೋಪಿಗಳು ಅವಾಚ್ಯವಾಗಿ ಬೈದಿದ್ದಾರೆ. ನೀನು ಮುಸ್ಲಿಂ, ಹಿಂದೂ ಹುಡುಗಿಯರನ್ನು ಎಲ್ಲಿ ಕರೆದುಕೊಂಡು ಹೋಗಿದ್ದೀಯಾ? ಇಲ್ಲಿನ ವಿಚಾರ ನಿನಗೆ ಗೊತ್ತಲ್ಲ ಎಂದು ಬೆದರಿಕೆ ಹಾಕಿದ್ದಾರೆ. ನಾನು ಪೊಲೀಸ್ ಎಂದು ಎಷ್ಟು ಗೋಗೆರದರೂ ಲೆಕ್ಕಿಸಿದೆ ಹಲ್ಲೆಗೂ ಮುಂದಾಗಿದ್ದಾರೆ.ಅದೇ ವೇಳೆ ಗಲಾಟೆ ನಡೆಯುವುದನ್ನು ನೋಡಿ ಕುಮಾರ್ ಅವರ ಪತ್ನಿ ಮನೆಯಿಂದ ಹೊರಗೆ ಬಂದಾಗ ಅವರ ವಿಡಿಯೋ ಚಿತ್ರೀಕರಣ ಮಾಡಿ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಅವರು ಆರೋಪಿಸಿ ದೂರು ನೀಡಿದ್ದಾರೆ.

ಸದ್ಯ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದು, ತನಿಖೆ ಮುಂದುವರಿದಿದೆ.

Latest Indian news

Popular Stories