ಬೆಳ್ತಂಗಡಿ: ಸೌಜನ್ಯಾ ನ್ಯಾಯಕ್ಕಾಗಿ ಬೃಹತ್‌ ಪ್ರತಿಭಟನೆ

ಬೆಳ್ತಂಗಡಿ: ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಎಲ್ಲ ತನಿಖೆಗಳು ವಿಫಲವಾಗಿರುವುದೇ ದುರಂತ. ಯಾವುದೇ ಹೆಣ್ಣುಮಗಳಿಗೆ ಈ ಅನ್ಯಾಯವಾಗಬಾರದು, ಅದಕ್ಕಾಗಿ ಈ ಹೋರಾಟ. ನ್ಯಾಯಯುತ ಹೋರಾಟಕ್ಕೆ ಬೆಂಬಲವಿದೆ ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ| ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು.

ಪ್ರಜಾಪ್ರಭುತ್ವ ವೇದಿಕೆ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ವತಿಯಿಂದ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ನ್ಯಾಯಕ್ಕಾಗಿ ಸೆ. 3ರಂದು ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡ ಪ್ರತಿಭಟನೆ ಸಭೆ ಉದ್ಘಾಟಿಸಿ ಮಾತನಾಡಿದರು.

ಪ್ರಮುಖವಾಗಿ ತನಿಖೆ ನಡೆಸಿದ ಪೊಲೀಸ್‌ ತನಿಖಾಧಿಕಾರಿ ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ಮಂಪರು ಪರೀಕ್ಷೆ ನಡೆಸಬೇಕು. ನಿರ್ದೋಷಿತ ಸಂತೋಷ್‌ ರಾವ್‌ಗೆ ಬದುಕು ರೂಪಿಸಿಕೊಳ್ಳಲು ಬೇಕಾದ ವ್ಯವಸ್ಥೆ ಹಾಗೂ ಕುಸುಮಾವತಿ ಕುಟುಂಬಕ್ಕೆ ತತ್‌ಕ್ಷಣವೇ ರಕ್ಷಣೆ ಒದಗಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಮಾತನಾಡಿ, ಹೋರಾಟಕ್ಕೆ ಶ್ರೀರಾಮಸೇನೆ ಸಂಪೂರ್ಣ ಬೆಂಬಲ ನೀಡಲಿದೆ. ಸರಕಾರ ಈ ಪ್ರಕರಣ ಮರು ತನಿಖೆಗೆ ಆದೇಶಿಸಬೇಕು. ಜತೆಗೆ ಸಂತೋಷ್‌ ರಾವ್‌ ಹಾಗೂ ಸೌಜನ್ಯಾ ಕುಟುಂಬಕ್ಕೆ ತಲಾ 25 ಲಕ್ಷ ರೂ. ನೀಡಬೇಕು. ದ.ಕ. ಉಡುಪಿಯಲ್ಲಿ ಗೆದ್ದ ಎರಡು ಪಕ್ಷಗಳ ಸಂಸದ, ಶಾಸಕರು ತಲಾ 5 ಲಕ್ಷ ರೂ. ನೀಡಿ ಎರಡೂ ಕುಟುಂಬಗಳು ಬದುಕಲು ಅವಕಾಶ ಕಲ್ಪಿಸಬೇಕು ಎಂದರು.

ಸೌಜನ್ಯಾಳ ಕುಟುಂಬಕ್ಕೆ ನ್ಯಾಯ ಒದಗಿಸಲು ಈ ಹೋರಾಟ ಆರಂಭಿಸಿದ್ದೇವೆ. ಮುಂದೆ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ವೇದಿಕೆ ಆಧ್ಯಕ್ಷ ಮಹೇಶ್‌ ಶೆಟ್ಟಿ ತಿಮರೋಡಿ ಹೇಳಿದರು.

ಸೌಜನ್ಯ ತಾಯಿ ಕುಸುಮಾವತಿ ಮಾತನಾಡಿ, ನನ್ನ ಮಗಳಿಗೆ ಆದ ಅನ್ಯಾಯಕ್ಕೆ ರಾಜ್ಯಾದ್ಯಂತ ಹೋರಾಟದಲ್ಲಿ ಬಂದು ನನಗೆ ಶಕ್ತಿ ತುಂಬಿದ್ದೀರಿ. ತಪ್ಪಿತಸ್ಥರಿಗೆ ಖಂಡಿತಾ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ವಕೀಲ ಮೋಹಿತ್‌ ಕುಮಾರ್‌, ಪ್ರಸನ್ನಾ ರವಿ, ತಮ್ಮಣ್ಣ ಶೆಟ್ಟಿ ಮತ್ತಿತರರು ಮಾತನಾಡಿದರು.

ಅನಿಲ್‌ ಕುಮಾರ್‌ ಅಂತರ ಪ್ರಸ್ತಾವನೆಗೈದರು. ಆನಂದ್‌ ಕುಲಾಲ್‌ ಎಡೂ¤ರು ನಿರೂಪಿಸಿದರು.

Latest Indian news

Popular Stories