
‘ಬಿಪೊರ್ ಜಾಯ್’ ಚಂಡಮಾರುತ ತೀವ್ರಗೊಳ್ಳಲಿದೆ, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ: ಹವಾಮಾನ ಇಲಾಖೆ
ನವದೆಹಲಿ: ‘ಬಿಪೊರ್ ಜಾಯ್’ ಚಂಡಮಾರುತ ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ. ಚಂಡಮಾರುತ ಉತ್ತರ-ಈಶಾನ್ಯದತ್ತ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಭಾರತೀಯ ಕಾಲಮಾನ ಜೂನ್ 9ರ ರಾತ್ರಿ 10.30ಕ್ಕೆ ಅತೀ ತೀವ್ರ ಚಂಡಮಾರುತ ‘ಬಿಪೊರ್ ಜಾಯ್’ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಬೀಸಿದ್ದು, ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಮತ್ತು ಉತ್ತರ-ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ ಎಂದು ಹಾವಾಮಾನ ಇಲಾಖೆ ಟ್ವೀಟ್ ಮಾಡಿದೆ.
‘ಬಿಪೊರ್ ಜಾಯ್’ ಚಂಡಮಾರುತದ ನಿರೀಕ್ಷೆಯಲ್ಲಿ, ಅರಬ್ಬಿ ಸಮುದ್ರದ ಕರಾವಳಿಯ ವಲ್ಸಾದ್‌ನ ತಿಥಾಲ್ ಬೀಚ್‌ನಲ್ಲಿ ಎತ್ತರದ ಎಲೆಗಳು ಉಂಟಾಗಿವೆ. ಮುಂಜಾಗ್ರತಾ ಕ್ರಮವಾಗಿ ತಿಥಾಲ್ ಬೀಚ್ ನ್ನು ಜೂನ್ 14 ರವರೆಗೆ ಪ್ರವಾಸಿಗರ ಪ್ರವೇಶಕ್ಕೆ ಮುಚ್ಚಲಾಗಿದೆ.
ನಾವು ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದೇವೆ. ಅಗತ್ಯವಿದ್ದರೆ ಜನರನ್ನು ಸಮುದ್ರ ತೀರದಲ್ಲಿರುವ ಗ್ರಾಮಕ್ಕೆ ಸ್ಥಳಾಂತರಿಸಲಾಗುವುದು. ಅವರಿಗೆ ಆಶ್ರಯ ಕಲ್ಪಿಸಲಾಗಿದೆ. ಜೂನ್ 14 ರವರೆಗೆ ಪ್ರವಾಸಿಗರಿಗೆ ತಿಥಾಲ್ ಬೀಚ್ ನ್ನು ಮುಚ್ಚಿದ್ದೇವೆ ಎಂದು ವಲ್ಸದ್ ತಹಶಿಲ್ದಾರ್ ಟಿ ಸಿ ಪಟೇಲ್ ತಿಳಿಸಿದ್ದಾರೆ.
ಮುಂದಿನ 36 ಗಂಟೆಗಳಲ್ಲಿ ಬಿಪೊರ್ ಜಾಯ್ ಚಂಡಮಾರುತ ತೀವ್ರಗೊಳ್ಳಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು, ಕೇರಳ, ಕರ್ನಾಟಕ ಮತ್ತು ಲಕ್ಷದ್ವೀಪ ಕರಾವಳಿಯ ಸಮುದ್ರಕ್ಕೆ ತೆರಳದಂತೆ ಹವಾಮಾನ ಇಲಾಖೆ ಮೀನುಗಾರರಿಗೆ ಸೂಚಿಸಿದೆ.
ಕೇರಳದ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಕೋಝಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.




