ಮಂಗಳೂರು: ಸೈಬರ್ ವಂಚನೆ ಆರೋಪಿಯ ಜೊತೆ ಸಲುಗೆ ವರ್ತಿಸಿ ಉರ್ವಾ ಠಾಣೆಯ ಪೊಲೀಸರು ಇದೀಗ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಅಮೆಜಾನ್ ಕಂಪೆನಿಗೆ ವಂಚಿಸಿದ ಆರೋಪದ ಮೇಲೆ ಬಂಧಿತರಾದ ಸೈಬರ್ ಖದೀಮರೊಂದಿಗೆ ಪೊಲೀಸರು ಸಲುಗೆಯಿಂದ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ತನಿಖೆಯ ನೆಪದಲ್ಲಿ ಆರೋಪಿಗಳೊಂದಿಗೆ ವಿವಿಧೆಡೆ ಪ್ರವಾಸ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.
ರಾಜಸ್ಥಾನ ಮೂಲದ ರಾಜ್‌ಕುಮಾರ್ ಮೀನಾ (23) ಮತ್ತು ಸುಭಾಸ್ ಗುರ್ಜರ್ (27) ಎಂಬುವರು ಅಮೆಜಾನ್ ಕಂಪನಿಯ ನಿಯಮಗಳನ್ನೇ ಬಂಡವಾಳ ಮಾಡಿಕೊಂಡು ಸುಮಾರು 30 ಕೋಟಿ ರೂ.ಗಳನ್ನು ಲೂಟಿ ಮಾಡಿದ್ದರು. ಈ ಬಗ್ಗೆ ತಮಿಳುನಾಡಿನ ಸೇಲಂನಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಅಲ್ಲಿನ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಮಂಗಳೂರಿನ ಉರ್ವಾ ಠಾಣೆಯಲ್ಲಿಯೂ ಪ್ರಕರಣ ದಾಖಲಾದ್ದರಿಂದ ಸೇಲಂ ಜೈಲ್‌ನಿಂದ ವಾರಂಟ್ ಪಡೆದು ಇಬ್ಬರನ್ನು ನಗರಕ್ಕೆ ಕರೆತರಲಾಗಿತ್ತು.
ಬಂಧಿತ ಆರೋಪಿಗಳ ಖರ್ಚಿನಲ್ಲೇ ಗುಜರಾತ್‌ಗೆ ತೆರಳಿದ್ದ ಪೊಲೀಸರು, ಅಲ್ಲಿ ಅವರೊಂದಿಗೆ ಸಲುಗೆಯಿಂದ ವರ್ತಿಸಿದ್ದಾರೆ. ಉರ್ವಾ ಠಾಣೆಯ ನಾಲ್ವರು ಪೊಲೀಸರು ಗುಜರಾತ್‌ನ ಹಲವೆಡೆ ಸುತ್ತಾಡಿ ಆರೋಪಿಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇಷ್ಟೇ ಅಲ್ಲದೆ, ಬಂಧನ ಬಳಿಕ ಸೈಬರ್ ಕ್ರೈಂ ಆರೋಪಿಯಿಂದಲೇ ಸೈಬರ್ ವಂಚನೆ ಬಗ್ಗೆ ಜಾಗೃತಿ ಪಾಠವನ್ನೂ ನಡೆಸಿದ್ದಾರೆ. ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ಕಾನೂನು ಕಾಲೇಜೊಂದರ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆರೋಪಿಯೇ ಸೈಬರ್ ವಂಚನೆ ಬಗ್ಗೆ ಮಾಹಿತಿ ನೀಡಿದ್ದಾನೆ. ಈ ಕಾರ್ಯಕ್ರಮವು ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿಯೇ ನಡೆದಿದೆ ಎಂದು ತಿಳಿದುಬಂದಿದೆ.
ಈಗ ಪೊಲೀಸರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆರೋಪಿಗಳಿಗೆ ಇಷ್ಟೊಂದು ಸಲುಗೆ ತೋರುವುದು ಸರಿಯಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಈ ಪ್ರಕರಣವು ಮಂಗಳೂರು ಪೊಲೀಸ್ ಇಲಾಖೆಗೆ ಮುಜುಗರ ತಂದಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.