ಪ್ರತಿಯೊಬ್ಬ ಪ್ರಜೆಯ ಮಾನವ ಹಕ್ಕುಗಳನ್ನು ರಕ್ಷಿಸುವುದು ರಾಜ್ಯದ ಮತ್ತು ಇತರ ಎಲ್ಲಾ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ: ಯತೀಶ್ ಉಲ್ಲಾಳ್

Kodagu: ಮಾನವ ಹಕ್ಕುಗಳ ದಿನಾಚರಣೆಯ ಪ್ರಮುಖ ಉದ್ದೇಶ ಮಾನವ ಹಕ್ಕುಗಳ ರಕ್ಷಣೆ, ಅರಿವು ಮತ್ತು ನೆರವು ಎಂದು ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಿದ ಮಾನವ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಯಶಸ್ವಿಯಾಗಬೇಕೆ ಹೊರತು ಮಾನವ ಹಕ್ಕನ್ನು ಉಲ್ಲಂಘಿಸಬಾರದು ಎಂದರು. ರಾಜ್ಯ ಸರ್ಕಾರದ ಮಾನವ ಹಕ್ಕುಗಳ ಆಯೋಗವು ನಿತ್ಯ ದೈನಂದಿನ ಚಟುವಟಿಕೆಗಳಲ್ಲಿ ಯಾವುದು ಮಾನವ ಹಕ್ಕು ಉಲ್ಲಂಘನೆಯಾಗುವುದು ಹಾಗೂ ಸರಿ-ತಪ್ಪು ಗಳನ್ನು ವಿವರವಾಗಿ ತಿಳಿಸುತ್ತದೆ.

ನಮ್ಮ ಬದುಕನ್ನು ಅರ್ಥಪೂರ್ಣವನ್ನಾಗಿಸಿ ತೃಪ್ತಿದಾಯಕವಾಗುವಂತೆ ಮಾಡುವಂತಹ ಮೂಲಭೂತ ಅರ್ಹತೆಗಳು ಹಾಗೂ ಸ್ವಾತಂತ್ರ್ಯಗಳನ್ನು ಮಾನವ ಹಕ್ಕುಗಳೆಂದು ಕರೆಯಲಾಗುತ್ತದೆ ಎಂದು ತಿಳಿಸಿದರು. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು “ಮಾನವ ಹಕ್ಕು ರಕ್ಷಣೆ” ಎಂಬ ಆಪ್ ಬಿಡುಗಡೆಗೊಳಿಸಿದೆ ಸರ್ಕಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬರು ಈ ಆಪ್ ಅನ್ನು ಬಳಸಲು ಉಪ ವಿಭಾಗಾಧಿಕಾರಿ ಸೂಚಿಸಿದರು.

ಮಾನವ ಹಕ್ಕುಗಳ ಪರಿಧಿ ವ್ಯಾಪಕ ಸ್ವರೂಪದ್ದು ಅದು ನಾಗರಿಕ ರಾಜಕೀಯ ಸಾಂಸ್ಕೃತಿಕ ಮತ್ತು ಆರ್ಥಿಕ ಹಕ್ಕುಗಳನ್ನು ಒಳಗೊಂಡಿದೆ. ಇವುಗಳಲ್ಲಿ ಅತಿ ಮುಖ್ಯವಾದವು ಸಮಾನತೆಯ ಹಕ್ಕು, ಸಮಾನ ಕಾನೂನು ರಕ್ಷಣೆ, ಶೋಷಣೆ ರಹಿತ ಆರೋಗ್ಯ ಪೂರ್ಣ ಪರಿಸರದಲ್ಲಿ ಗೌರವಯುತ ಜೀವನ ನಡೆಸುವ ಹಕ್ಕು ಆಗಿದೆ, ತಮ್ಮ ಆಯ್ಕೆಯ ವೃತ್ತಿ, ಕಲಿಕೆಯ ಹಕ್ಕು, ಭಾರತದ ಯಾವುದೇ ಸ್ಥಳಕ್ಕೆ ಹೋಗಲು ಮತ್ತು ಅಲ್ಲಿ ವಾಸಿಸುವ ಹಕ್ಕು, ಆತ್ಮಸಾಕ್ಷಿ ಸ್ವಾತಂತ್ರ್ಯ ಹಕ್ಕು, ನಂಬಿಕೆ ಮತ್ತು ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಸ್ಪೃಶ್ಯತೆ ಅಥವಾ ಜಾತಿ ಮತ ಅಥವಾ ಲಿಂಗ ಆಧಾರಿತ ತಾರತಮ್ಯದಿಂದ ಮುಕ್ತಿ ಹಕ್ಕು, ಈ ರೀತಿಯ ಮಾನವ ಹಕ್ಕುಗಳ ರಕ್ಷಣೆಗೆ ಮತ್ತು ಅವುಗಳ ಪರಿಣಾಮಕಾರಿ ಜಾರಿಗಾಗಿ ಮಾನವ ಹಕ್ಕುಗಳ ರಕ್ಷಣೆ ಕಾಯ್ದೆ 1993 ರ ಅನ್ವಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಗಳನ್ನು ರಚನೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರತಿಯೊಬ್ಬ ಪ್ರಜೆಯ ಮಾನವ ಹಕ್ಕುಗಳನ್ನು ರಕ್ಷಿಸುವುದು ರಾಜ್ಯದ ಮತ್ತು ಇತರ ಎಲ್ಲಾ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ. ರಾಜ್ಯದ ಯಾವುದೇ ಕಚೇರಿಯಿಂದಾಗಲಿ ಅಥವಾ ಸಂಸ್ಥೆಯಿಂದಾಗಲಿ ಯಾವುದೇ ರೀತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದ ಪಕ್ಷದಲ್ಲಿ ಅಥವಾ ಮಾನವ ಹಕ್ಕುಗಳ ರಕ್ಷಣೆ ಮಾಡಲು ವಿಫಲವಾಗಿರುವ ಸಂದರ್ಭಗಳಲ್ಲಿ ತೊಂದರೆಗೆ ಒಳಗಾದವರಾಗಲಿ ಕುಂದು ಕೊರತೆಗಳನ್ನು ಪರಿಹರಿಸಲು ನ್ಯಾಯ ದೊರಕಿಸಿಕೊಳ್ಳಲು ಮಾನವ ಹಕ್ಕು ಆಯೋಗವನ್ನು ಸಂಪರ್ಕಿಸಬಹುದಾಗಿದೆ ಎಂದು ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಅವರು ಕೋರಿದರು.

ಪ್ರತಿಯೊಬ್ಬ ಮನುಷ್ಯನು ವಿಶೇಷ ವ್ಯಕ್ತಿಯಾಗಿದ್ದು ತನ್ನದೇ ಆದ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಹೊಂದಿದ್ದು ಯಾರು ಮತ್ತೊಬ್ಬ ವ್ಯಕ್ತಿಗಿಂತ ಕಡಿಮೆಯು ಅಲ್ಲ ಅಥವಾ ಹೆಚ್ಚು ಅಲ್ಲ ಎಂಬುದನ್ನು ಗುರುತಿಸುತ್ತವೆ. ಎಲ್ಲ ಮಾನವರು ಮುಕ್ತವಾಗಿ ಹಾಗೂ ಸಮಾನವಾಗಿ ಜನಿಸಿರುವವರೆಂದು ಮಾನವ ಹಕ್ಕುಗಳ ವಿಚಾರದ ತಳಹದಿಯಾಗಿದೆ.

ಪ್ರತಿಯೊಬ್ಬ ವ್ಯಕ್ತಿಯು ಘನತೆಯಿಂದ ಜೀವಿಸಲು ಅರ್ಹತೆ ಹೊಂದಿದ್ದು ರಾಜ್ಯವಾಗಲಿ, ಸಮುದಾಯವಾಗಲಿ, ಕುಟುಂಬವಾಗಲಿ, ಸಮಾಜವಾಗಲಿ ನ್ಯಾಯ ಸಮ್ಮತವಲ್ಲದ ಅಥವಾ ಪಕ್ಷಪಾತದಿಂದ ನೋಡಲು ಯಾರಿಗೂ ಹಕ್ಕಿಲ್ಲ ಮಾನವ ಹಕ್ಕುಗಳ ಅಂತರಾಷ್ಟ್ರೀಯ ಪದ್ಧತಿಯ ಹಾಗೂ ನಮ್ಮದೇ ಆದ ಸಂವಿಧಾನವು ಎಲ್ಲಾ ವ್ಯಕ್ತಿಗಳ ಮಾನವ ಹಕ್ಕುಗಳನ್ನು ಸಮಾನವಾಗಿ ನೋಡಬೇಕೆಂದು ಒತ್ತಾಯಿಸುತ್ತದೆ. ಈ ಕಾರಣದಿಂದಾಗಿ ಮಾನವ ಹಕ್ಕುಗಳು ಮಹತ್ವವಾಗಿದೆ ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಅವರು ಅಧಿಕಾರಿಗಳಿಗೆ ಮಾನವ ಹಕ್ಕುಗಳ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಹಿಂದುಳಿದ ವರ್ಗಗಳ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎನ್. ಮಂಜುನಾಥ್ , ತಹಶಿಲ್ದಾರ್ ಪ್ರವೀಣ್ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆನಂದ್, ಸಮಗ್ರ ಶಿಕ್ಷಣ ಇಲಾಖೆಯ ಉಪ ಯೋಜನಾ ಸಂಯೋಜಕರಾದ ಸೌಮ್ಯ ಪೊನ್ನಪ್ಪ ಮತ್ತಿತರರು ಇದ್ದರು.

Latest Indian news

Popular Stories