Dakshina KannadaFeatured Story

ಮಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣ; ಅಬ್ದುಲ್ ಸಫ್ವಾನ್, ನಾಗರಾಜ್, ರಂಜಿತ್,ರಿಯಾಝ್ ಸಹಿತ 8 ಮಂದಿಯ ಬಂಧನ

ಮಂಗಳೂರು: ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಮೇ 1 ರಂದು ರಾತ್ರಿ ಸುಮಾರು 8:30ರ ಸುಮಾರಿಗೆ ಬಂಟ್ವಾಳ ತಾಲೂಕಿನ ಕಿನಿಯಾಪದವು ಗ್ರಾಮದ ಬಳಿ ಸುಹಾಸ್ ಶೆಟ್ಟಿ ಮತ್ತು ಆತನ ಸ್ನೇಹಿತರು ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದಾಗ, ಬಿಳಿ ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸುಹಾಸ್ ಶೆಟ್ಟಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಗಂಭೀರತೆಯನ್ನು ಅರಿತ ಮಂಗಳೂರು ನಗರ ಪೊಲೀಸ್ ಆಯುಕ್ತರು ತಕ್ಷಣವೇ ವಿಶೇಷ ತಂಡಗಳನ್ನು ರಚಿಸಿದ್ದರು. ಮಂಗಳೂರು ಸಿಸಿಬಿ ಎಸಿಪಿ, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮತ್ತು ಬಜ್ಪೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು. ಈ ತಂಡವು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪೊಲೀಸರ ವಿಚಾರಣೆಯ ಪ್ರಕಾರ, ಈ ಕೊಲೆಗೆ ಮುಖ್ಯ ಕಾರಣವೆಂದರೆ ಹಳೆಯ ದ್ವೇಷ. 2023ರಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹಲ್ಲೆಯೊಂದರಲ್ಲಿ ಸುಹಾಸ್ ಶೆಟ್ಟಿ ಮತ್ತು ಆತನ ಸಹಚರರು ಭಾಗಿಯಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಅಬ್ದುಲ್ ಸಫ್ವಾನ್ ಮತ್ತು ಇತರರು ಸೇರಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಅಬ್ದುಲ್ ಮೆಹರೂಫ್ ಎಂಬಾತನು ಕೊಲೆಗೆ ಹಣಕಾಸಿನ ನೆರವು ನೀಡಿದ್ದಲ್ಲದೆ, ಕೊಲೆಗೆ ಬಳಸಿದ ಬೊಲೆರೊ ಪಿಕಪ್ ವಾಹನ (KA 20 AB 2459) ಮತ್ತು ಮಾರಕಾಸ್ತ್ರಗಳನ್ನು ಒದಗಿಸಿದ್ದನೆಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.

ಬಂಧಿತ ಆರೋಪಿಗಳ ವಿವರ ಇಂತಿದೆ:
* ಅಬ್ದುಲ್ ಸಫ್ವಾನ್ (25), ತಂದೆ: ಅಬ್ದುಲ್ ನಾಸೀರ್, ವಿಳಾಸ: ಶಾಂತಿಗುಡ್ಡೆ, ಬಜ್ಪೆ ಗ್ರಾಮ, ಮಂಗಳೂರು.
* ರಿಯಾಜ್ (25), ತಂದೆ: ಅಬೂಬಕ್ಕರ್, ವಿಳಾಸ: ಶಾಂತಿಗುಡ್ಡೆ, ಬಜ್ಪೆ ಗ್ರಾಮ, ಮಂಗಳೂರು.
* ಮೊಹಮ್ಮದ್ ಮುಜಮ್ಮಿಲ್ (32), ತಂದೆ: ಅಬ್ದುಲ್ ರಜಾಕ್, ವಿಳಾಸ: ಶಾಂತಿಗುಡ್ಡೆ, ಬಜ್ಪೆ ಗ್ರಾಮ, ಮಂಗಳೂರು.
* ಕಲಂದರ್ ಶಫಿ (29), ತಂದೆ: ಮೊಹಮ್ಮದ್, ವಿಳಾಸ: ಕುರ್ಜುಗುಡ್ಡೆ, ಕಲಾವರು, ಬಾಳ ಗ್ರಾಮ, ಮಂಗಳೂರು.
* ಅದಿಲ್ ಮೆಹರೂಫ್ (27), ತಂದೆ: ಉಮರ್ ಫಾರೂಖ್, ವಿಳಾಸ: ಮಂಗಳಾಪೇಟೆ, ಬಾಳ ಗ್ರಾಮ, ಮಂಗಳೂರು.
* ನಾಗರಾಜ್ ಎಂ (20), ತಂದೆ: ಮಾರಿಮುತ್ತು, ವಿಳಾಸ: ಕೋಟೆಹೊಳೆ, ಮಾವಿನಕೆರೆ ಗ್ರಾಮ, ಕಳಸ ತಾಲೂಕು, ಚಿಕ್ಕಮಗಳೂರು.
* ಮೊಹಮ್ಮದ್ ರಿಜ್ವಾನ್ (28), ತಂದೆ: ಅಬ್ದುಲ್ ಮಜೀದ್, ವಿಳಾಸ: ಜೊಕಟ್ಟೆ, 62ನೇ ತೊಕ್ಕುರು ಗ್ರಾಮ, ಮಂಗಳೂರು.
* ರಂಜಿತ್ ಕಳಸ

ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button