ಪುತ್ತೂರು, ಮೇ 4: ಮಂಗಳವಾರ ನಡೆದ ನೈತಿಕ ರೌಡಿಸಂ ಘಟನೆಗೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಮರೇಲ್ ಕಾಡುಮನೆ ನಿವಾಸಿ ಮೊಹಮ್ಮದ್ ಫರೀಷ್ (18) ಹಿಂದೂ ಯುವತಿಯೊಂದಿಗೆ ಇದ್ದಾಗ ಗುಂಪೊಂದು ತೀವ್ರವಾಗಿ ಹಲ್ಲೆ ನಡೆಸಿದೆ. ಕ್ರೂರ ಹಲ್ಲೆಯಿಂದಾಗಿ ಫರೀಷ್ ಅವರ ದೇಹದ ಮೇಲೆ ಗಾಯಗಳಾಗಿವೆ.
ಫರೀಷ್ ಮತ್ತು ಆತನ ಜೊತೆಗಿದ್ದ ಹಿಂದೂ ಯುವತಿ ಕಬಕ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು. ಇಬ್ಬರೂ ನಗರದ ಮಾಲ್‌ನ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸಿದ್ದರು. ಬಳಿಕ ಬಸ್ ನಿಲ್ದಾಣದ ಬಳಿಯ ಅಂಗಡಿಯೊಂದಕ್ಕೆ ಹಣ್ಣಿನ ಜ್ಯೂಸ್ ಕುಡಿಯಲು ಹೋದಾಗ ಗುಂಪು ಯುವಕರ ಮೇಲೆ ಹಲ್ಲೆ ನಡೆಸಿದೆ. ಗಾಯಗೊಂಡ ಫರೀಷ್ ಅವರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿಂದೆ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ಸಿರ್ತಾಜೆ ನಿವಾಸಿ ಪ್ರದೀಪ್ ಎಸ್ (19) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ಇತರ ಆರೋಪಿಗಳಾದ ಕೆದಂಬಾಡಿ ಗ್ರಾಮದ ತಿಂಗಳಾಡಿ ನಿವಾಸಿ ದಿನೇಶ್ ಗೌಡ (25), ಗುತ್ತುಮನೆ ನಿವಾಸಿ ನಿಶಾಂತ್ ಕುಮಾರ್ ಜಿ (19), ಆರ್ಯಾಪು ಗ್ರಾಮದ ಕೊಟ್ಟಾರು ಮನೆ ನಿವಾಸಿ ಪ್ರಜ್ವಲ್ (23) ಅವರನ್ನು ಪೊಲೀಸರು ಬಂಧಿಸಿದ್ದಾರೆ.