ಸುಳ್ಯ: ಸರಣಿ ಕಳ್ಳತನ‌ – ತನಿಖೆ ಚುರುಕುಗೊಳಿಸಿದ ಪೊಲೀಸರು!

ಸುಳ್ಯ,ಜು.18: ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕನಕಮಜಲು ಮತ್ತು ಜಾಲ್ಸೂರು ವ್ಯಾಪ್ತಿಯಲ್ಲಿ ಸರಣಿ ಕಳ್ಳತನ ನಡೆದಿದೆ. ಕನಕಮಜಲುವಿನಲ್ಲಿ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದರೆ, ಜಾಲ್ಸೂರು ಮತ್ತು ವಿನೋಬನಗರದಲ್ಲಿ ಅಂಗಡಿಗಳನ್ನು ದೋಚಲಾಗಿದೆ.

ಕನಕಮಜಲು ಎಂಬಲ್ಲಿ ಬುಡ್ಲೆಗುತ್ತು ಉರೇಶ್ ಅವರು ತಮ್ಮ ಸಂಬಂಧಿಕರ ಅಂತ್ಯಕ್ರಿಯೆ ಸಮಾರಂಭಕ್ಕೆ ಬಂದಿದ್ದರು. ಮನೆಯ ಹಿಂಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಸುಮಾರು 30 ಪವನ್‌ ತೂಕದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ.

ಜಾಲ್ಸೂರಿನಲ್ಲಿ ಸಿಂಡಿಕೇಟ್ ಬ್ಯಾಂಕ್ ಬಳಿ ಜೋಗಿ ಎಂಬುವರ ಮಾಲೀಕತ್ವದ ಅಂಗಡಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಅಂಗಡಿಯಲ್ಲಿದ್ದ 2000 ರೂಪಾಯಿ ನಗದು ಹಾಗೂ ಇತರೆ ವಸ್ತುಗಳನ್ನು ದೋಚಿದ್ದಾರೆ.

ವಿನೋಬ ನಗರದಲ್ಲಿರುವ ಸುಂದರ ನಾಯಕ್ ಎಂಬುವರ ಮಾಲೀಕತ್ವದ ಪುಟಾಣಿ ಅಂಗಡಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಕೊಡೆ ಮತ್ತಿತರ ವಸ್ತುಗಳನ್ನು ಕದ್ದೊಯ್ದಿದ್ದಾರೆ.

ಮಂಗಳೂರಿನಿಂದ ಶ್ವಾನದಳ ಆಗಮಿಸಿ ಕಳ್ಳತನ ನಡೆದ ಮನೆ ಹಾಗೂ ಅಂಗಡಿಗಳಿಂದ ಮಹತ್ವದ ಸುಳಿವುಗಳನ್ನು ಪಡೆದುಕೊಂಡಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಧರ್ಮಪ್ಪ, ಪುತ್ತೂರು ಡಿವೈಎಸ್ಪಿ ಡಾ.ಗಣ.ಪಿ.ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ.

ಇಂತಹ ಕಳ್ಳತನಗಳು ಮರುಕಳಿಸದಂತೆ ರಾತ್ರಿ ಪೊಲೀಸ್ ಬೀಟ್ ಹೆಚ್ಚಿಸಲಾಗುವುದು ಎಂದು ದಕ್ಷಿಣ ಕನ್ನಡ ಎಸ್ಪಿ ಸಿ ಬಿ ರಿಷ್ಯಂತ್ ಹೇಳಿದ್ದಾರೆ.

Latest Indian news

Popular Stories