ಮಂಗಳೂರು, ಏಪ್ರಿಲ್ 13: ಉಳ್ಳಾಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು ಟಿ ಖಾದರ್ ಮಸೀದಿ, ಮದರಸಾಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಎಸ್‌ಡಿಪಿಐ ಭಾರತ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಮದನಿ ನಗರ, ಉಳ್ಳಾಲ ಕೋಡಿ ಮಸೀದಿ ಹಾಗೂ ಮದರಸಾಗಳಲ್ಲಿ ಶಾಸಕ ಯು ಟಿ ಖಾದರ್ ಮಾತನಾಡುತ್ತಿರುವ ಚಿತ್ರಗಳು ವೈರಲ್ ಆಗಿವೆ.
“ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ಪ್ರಚಾರ ಮಾಡುವುದು ಸರಿಯಲ್ಲ. ಆಯೋಗವು ಕೂಡಲೇ ಅಭ್ಯರ್ಥಿಯ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಎಸ್‌ಡಿಪಿಐ ಆನ್‌ಲೈನ್‌ನಲ್ಲಿ ದಾಖಲಾಗಿರುವ ದೂರಿನಲ್ಲಿ ತಿಳಿಸಿದೆ.
ದೂರಿನ ಆಧಾರದ ಮೇಲೆ ಚುನಾವಣಾ ಆಯೋಗದ ಅಧಿಕಾರಿಗಳು ಮಸೀದಿ ಮತ್ತು ಮದರಸಾಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಆ ನಿಟ್ಟಿನಲ್ಲಿ ವೀಡಿಯೋ ದೃಶ್ಯಾವಳಿಗಳಿದ್ದರೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ದೂರುದಾರರಿಗೆ ಆಯೋಗ ಭರವಸೆ ನೀಡಿದೆ.