ದಾವಣಗೆರೆ: ಹಾಲಿ ಸಂಸದ ಜಿಎಂ ಸಿದ್ದೇಶ್ವರ ನಾಮಪತ್ರ ತಿರಸ್ಕೃತ

ದಾವಣಗೆರೆ, ಏಪ್ರಿಲ್. 20: ಈ ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿತ್ತು. ಹಾಲಿ ಸಂಸದ ಜಿಎಂ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಬಾರದು ಎಂಬ ಒತ್ತಡ ಮಾಜಿ ಸಚಿವ ರೇಣುಕಾಚಾರ್ಯರಿಂದ ಕೇಳಿ ಬಂದಿತ್ತು. ಬಳಿಕ ಬಿಜೆಪಿ ಜಿಎಂ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರನ್ನು ಕಣಕ್ಕಿಳಿಸಿದೆ.

ನಿನ್ನೆಯಷ್ಟೇ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಜೊತೆಗೆ ಹಾಲಿ ಸಂಸದ ಜಿಎಂ ಸಿದ್ದೇಶ್ವರ ಅವರು ಬಿಜೆಪಿ ಪರ್ಯಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಅವರ ನಾಮಪತ್ರ ತಿರಸ್ಕೃತವಾಗಿದೆ. ಏಪ್ರಿಲ್ 20 ರಂದು ನಡೆದ ನಾಮಪತ್ರಗಳ ಪರಿಶೀಲನೆ ವೇಳೆ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಜಿಎಂ ಸಿದ್ದೇಶ್ವರ ಸೇರಿ ಒಟ್ಟು 12 ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ.

ಲೋಕಸಭಾ ಚುನಾವಣೆ ನಡೆಯುತ್ತಿದ್ದು 33 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ದವಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಏಪ್ರಿಲ್ 19 ಕೊನೆಯ ದಿನವಾಗಿತ್ತು. ಒಟ್ಟು 40 ಅಭ್ಯರ್ಥಿಗಳಿಂದ 54 ನಾಮಪತ್ರಗಳು ಸಲ್ಲಿಕೆಯಾಗಿದ್ದವು.

ಏಪ್ರಿಲ್ 20 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ನಾಮಪತ್ರಗಳ ಪರಿಶೀಲನೆಯು ಚುನಾವಣಾ ವೀಕ್ಷಕರಾದ ಎಂ.ಲಶ್ಮಿ ಹಾಗೂ ಅಭ್ಯರ್ಥಿಗಳ ಸಮ್ಮುಖದಲ್ಲಿ ನಡೆಯಿತು. ಒಟ್ಟು ಸಲ್ಲಿಕೆಯಾದ 54 ನಾಮಪತ್ರಗಳಲ್ಲಿ 42 ನಾಮಪತ್ರಗಳು ಕ್ರಮಬದ್ದವಾಗಿದ್ದು, 12 ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ. ನಾಮಪತ್ರ ಸಲ್ಲಿಸಿದ 40 ಅಭ್ಯರ್ಥಿಗಳಲ್ಲಿ 7 ಅಭ್ಯರ್ಥಿಗಳ ನಾಮಪತ್ರ ಸಂಪೂರ್ಣವಾಗಿ ತಿರಸ್ಕೃತವಾಗಿವೆ.

Latest Indian news

Popular Stories