EducationCivic issuesFeatured Story

ಎಸೆಸೆಲ್ಸಿ, ಪಿಯು ಅಂಕಪಟ್ಟಿ ತಿದ್ದುಪಡಿ ಕುರಿತು ಪ್ರಮುಖ ಮಾಹಿತಿ

ಪರೀಕ್ಷಾ ಮಂಡಳಿ ಮಾಡಿದ ಕೈ ತಪ್ಪಿನಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಅಂಕಪಟ್ಟಿ ತಿದ್ದುಪಡಿಗೆ ಇಂದಿಗೂ ಅಲೆದಾಡುವಂತಾಗಿದ್ದು, ಈಗ ಮಂಡಳಿ ತಿದ್ದುಪಡಿ ಶುಲ್ಕ ಹೆಚ್ಚಿಸಿರುವ ಪರಿಣಾಮ ಅಂಕಪಟ್ಟಿ ತಿದ್ದುಪಡಿಗೆ ಇನ್ನು ಮುಂದೆ ವಿದ್ಯಾರ್ಥಿಗಳು ದುಬಾರಿ ಮೊತ್ತ ಪಾವತಿಸಬೇಕಾಗಿದೆ.

ರಾಜ್ಯದಲ್ಲಿ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯು ಅಂಕ ಪಟ್ಟಿಗಳ ತಿದ್ದುಪಡಿಗೆ ವಿದ್ಯಾರ್ಥಿಗಳಿಂದ ಅರ್ಜಿಗಳು ಪರೀಕ್ಷಾ ಮಂಡಳಿಗೆ ಸಲ್ಲಿಕೆ ಆಗುತ್ತಲೇ ಇದ್ದು, ಇದರ ನಿರ್ವಹಣೆಗಾಗಿ ಈಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿದ್ದುಪಡಿ ಶುಲ್ಕವನ್ನು ಪರಿಷ್ಕೃತಗೊಳಿಸಿ 1,600 ರೂ.ಗೆ ಏರಿಸಿ ಆದೇಶಿಸಿದೆ.

ರಾಜ್ಯದಲ್ಲಿ ಪರೀಕ್ಷಾ ಮಂಡಳಿಯಿಂದ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪ್ರಸ್ತುತ ಮತ್ತು ಹಿಂದಿನ ಸಾಲಿನಲ್ಲಿ ವಿತರಿಸಿರುವ ಅಂಕಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಭಾವಚಿತ್ರ, ಲಿಂಗ, ಮಾಧ್ಯಮ ಮತ್ತು ಜನ್ಮ ದಿನಾಂಕ ತಪ್ಪಾಗಿ ಮುದ್ರಿತವಾಗಿದ್ದು, ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಮುಂದುವರಿಕೆ ಜತೆಗೆ ಉದ್ಯೋಗ ಸ್ಥಳಗಳಲ್ಲಿ ತೀವ್ರ ಸಮಸ್ಯೆ ಆಗಿ ಪರಿಣಮಿಸಿದೆ.

ಇದರಿಂದ ರಾಜ್ಯಾದ್ಯಂತ ಅಂಕಪಟ್ಟಿಗಳ ತಿದ್ದುಪಡಿಗಳಿಗೆ ಸಂಬಂಧಿಸಿ ವಿವಿಧ ಕಾಲೇಜುಗಳ ಪ್ರಾಂಶುಪಾಲರಿಂದ ಮಂಡಳಿಗೆ ಪ್ರಸ್ತಾವನೆಗಳು ಬರುತ್ತಲೇ ಇವೆ. ಹೀಗಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಪರಿಶೀಲಿಸಿ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ಲಿಂಗ ಹಾಗೂ ಮಾಧ್ಯಮ ತಿದ್ದುಪಡಿ ಮಾಡಲು ನಿರ್ಣಯಿಸಿರುವ ಮಂಡಳಿ, ಅದಕ್ಕಾಗಿ ಶುಲ್ಕ ಹೆಚ್ಚಿಸಿದ್ದು, ಅಂಕಪಟ್ಟಿ ತಿದ್ದುಪಡಿಗೆ 1,600 ರೂ. ಶುಲ್ಕ ಕಟ್ಟಬೇಕಿದೆ.

ಬ್ಯಾಂಕ್‌ನಲ್ಲಿ ಹಣ ಪಾವತಿಸಿದ ಮೂಲ ಕೆ-2 ಚಲನ್‌ ಪ್ರತಿ, ಎಸೆಸೆಲ್ಸಿ ಅಂಕಪಟ್ಟಿಯ ದೃಢೀಕೃತ ಪ್ರತಿ ಮತ್ತು ದ್ವಿತೀಯ ಪಿಯುಸಿಯ ಮೂಲ ಅಂಕಪಟ್ಟಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಪ್ರಸ್ತಾವನೆ ಸಲ್ಲಿಸಿದಲ್ಲಿ ಮಂಡಳಿಯ ವತಿಯಿಂದ ಪರಿಷ್ಕೃತ ಅಂಕಪಟ್ಟಿಯನ್ನು ನೀಡಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಎಸೆಸೆಲ್ಸಿ, ಪಿಯು ಅಂಕಪಟ್ಟಿಗಳ ತಿದ್ದುಪಡಿ ಮಾಡುವ ಸಂದರ್ಭಗಳಲ್ಲಿ ಅಭ್ಯರ್ಥಿಯು ಸಲ್ಲಿಸಿರುವಂತಹ ಮೂಲ ಅಂಕಪಟ್ಟಿಯಲ್ಲಿಯೇ ಬೆರಳಚ್ಚು ಯಂತ್ರದ ಮೂಲಕ ತಿದ್ದುಪಡಿ ಮಾಡಿ ಶಾಖೆಯ ಹಿರಿಯ ಸಹಾಯಕ ನಿರ್ದೇಶಕರಿಂದ ದೃಢೀಕರಿಸಲಾಗುತ್ತಿತ್ತು. ಆದರೆ ಕೆಲವು ಅಭ್ಯರ್ಥಿಗಳು ಮೂಲ ಅಂಕಪಟ್ಟಿಗಳಲ್ಲಿ ತಿದ್ದುಪಡಿಯಾಗಿರುವುದನ್ನು ಕೆಲವು ಸಂಸ್ಥೆ, ಇಲಾಖೆಗಳಲ್ಲಿ ಒಪ್ಪದ ಕಾರಣ ಮೂಲ ಅಂಕಪಟ್ಟಿಯನ್ನು ಹಿಂದಿರುಗಿಸಿ ದ್ವಿಪ್ರತಿಗಾಗಿ ಪ್ರಸ್ತಾವನೆಗಳನ್ನು ಮಂಡಳಿಗೆ ಸಲ್ಲಿಸಲಾಗುತ್ತಿದೆ.
– ಕಾಗತಿ ನಾಗರಾಜಪ್ಪ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button