ಕಸಾಪ ಚುನಾವಣೆ: ಡಾ. ರಾಜಕುಮಾರ ಹೆಬ್ಬಾಳೆಗೆ ಸಾಹಿತಿ, ಗಣ್ಯರ ಬೆಂಬಲ

ಬೀದರ್: ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸುತ್ತಿರುವ ಕ್ರಿಯಾಶೀಲ ಯುವಕ ಡಾ.

ರಾಜಕುಮಾರ ಹೆಬ್ಬಾಳೆ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಜಿಲ್ಲೆಯ ಸಾಹಿತಿಗಳು, ಬರಹಗಾರರು, ಹಿರಿಯರು, ಕಸಾಪ ಅಜೀವ ಸದಸ್ಯರು ಒಲವು ವ್ಯಕ್ತಪಡಿಸಿದ್ದಾರೆ.


ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದ ನೂರಕ್ಕೂ ಹೆಚ್ಚು ಸಾಹಿತಿ, ಗಣ್ಯರು, ಡಾ. ರಾಜಕುಮಾರ ಹೆಬ್ಬಾಳೆ ಅವರ ಆಯ್ಕೆಗೆ ಒಗ್ಗಟ್ಟಿನ ಮಂತ್ರ ಜಪಿಸಿದರು.

ಡಾ. ಹೆಬ್ಬಾಳೆ ಅವರು ಕಸಾಪ ಅಧ್ಯಕ್ಷರಾದಲ್ಲಿ ಜಿಲ್ಲೆಯ ಸಾಹಿತ್ಯ ಕ್ಷೇತ್ರದ ಬೆಳವಣಿಗೆಯ ವೇಗ ಹೆಚ್ಚಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಾ. ರಾಜಕುಮಾರ ಹೆಬ್ಬಾಳೆ ಒಬ್ಬ ಕ್ರಿಯಾಶೀಲ ಯುವಕ ಮತ್ತು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವ ಪರಿಶ್ರಮಜೀವಿ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳನ್ನು ಸಾಹಿತಿಗಳ ಮತ್ತು ಕಲಾವಿದರ ಮನೆಬಾಗಿಲಿಗೆ ತಲುಪಿಸುವ ಪ್ರಾಮಾಣಿಕ ಜೀವಿ.

ಇಂತಹ ಯುವಕರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಸಾಹಿತ್ಯ ಕ್ಷೇತ್ರ ಬೆಳವಣಿಗೆಯಾಗಬಲ್ಲದು ಎಂದು ಹಿರಿಯ ಸಾಹಿತಿ, ಬಸವಕಲ್ಯಾಣದ ಕಾಶಪ್ಪ ಬಾಲಕಿಲೆ ಹೇಳಿದರು.


ಕನ್ನಡ ಸಾಹಿತ್ಯ ಪರಿಷತ್ತು ಎಂದರೆ ಅದೊಂದು ಪ್ರಜ್ಞಾವಂತರ ಕ್ಷೇತ್ರ. ಇಲ್ಲಿ ಸುಳ್ಳು, ಮೋಸ, ವಂಚನೆ ಮಾಡುವವರಿಗೆ ಎಂದಿಗೂ ಅವಕಾಶ ನೀಡಬಾರದು. ಸುಳ್ಳು ಹೇಳುವವರನ್ನು ಮತದಾರರು ಯಾವುದೇ ಕಾರಣಕ್ಕೂ ನಂಬಬಾರದು. ಸುರೇಶ ಚನಶೆಟ್ಟಿ ಹೆಬ್ಬಾಳೆಯವರಿಗೆ ಮಾತು ಕೊಟ್ಟಿದ್ದೇ ಆದಲ್ಲಿ ಅದನ್ನು ಅವರು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಕೆಲವರ ಮಾತಿಗೆ ಕಟ್ಟುಬಿದ್ದು ಸಮಾಜದಲ್ಲಿ ತಮ್ಮ ಮರ್ಯಾದೆ ಕಳೆದುಕೊಳ್ಳಬಾರದು ಎಂದು ಬಾಲಕಿಲ್ಲೆ ಹೇಳಿದರು.


ಹಿರಿಯ ಸಾಹಿತಿ ಹಾಗೂ ಹಾಲಿ ಕಸಾಪ ಗೌರವಾಧ್ಯಕ್ಷರಾದ ಪಂಚಾಕ್ಷರಿ ಪುಣ್ಯಶೆಟ್ಟಿ ಮಾತನಾಡಿ, ಈ ಬಾರಿ ನನಗೆ ಆರಿಸಿ ತನ್ನಿ. ಮುಂದಿನ ಸಲ ರಾಜಕುಮಾರ ಅವರೇ ಅಭ್ಯರ್ಥಿ. ಅವರನ್ನು ಗೆಲ್ಲಿಸಿಕೊಂಡು ಬರೋಣ ಎಂದು ಸುಮಾರು 200 ಕ್ಕೂ ಹೆಚ್ಚು ಸಾಹಿತಿಗಳ, ಮುಖಂಡರ ಹಾಗೂ ಅಜೀವ ಸದಸ್ಯರ ಸಮ್ಮುಖದಲ್ಲಿ ಚನಶೆಟ್ಟಿ ಮಾತು ಕೊಟ್ಟಿದ್ದರು. ಅದಕ್ಕೆ ಜೀವಂತ ಸಾಕ್ಷಿ ನಾನೇ ಇದ್ದೆ. ಕಳೆದ ಬಾರಿ ಡಾ. ರಾಜಕುಮಾರ ಹೆಬ್ಬಾಳೆಯವರನ್ನು ಮನವೊಲಿಸಿ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ತಿಳಿಸಿದ್ದೆ. ಹಿರಿಯರ ಮಾತಿಗೆ ಮನ್ನಣೆ ನೀಡಿ ಹೆಬ್ಬಾಳೆ ಹಿಂದೆ ಸರಿದಿದ್ದು ನಿಜ. ಅಲ್ಲದೆ ಚನಶೆಟ್ಟಿಗೆ ಗೆಲ್ಲಿಸಿಕೊಂಡು ಬರಲು ಕಳೆದ ಬಾರಿ ತನು ಮನ ಧನದಿಂದ ಹೆಬ್ಬಾಳೆಯವರು ದುಡಿದಿದ್ದರು. ಆದರೆ, ಈಗ ಚನಶೆಟ್ಟಿ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಖಂಡನೀಯ. ಬಾಯಲ್ಲಿ ಬಸವಣ್ಣನವರ ವಚನಗಳನ್ನು ಹೇಳಿ, ನಡೆಯಲ್ಲಿ ಎಡವುತ್ತಿದ್ದಾರೆ. ಇದು ಬಸವ ತತ್ವಕ್ಕೆ ಅಪಚಾರ ಮಾಡಿದಂತಾಗುತ್ತದೆ. ಕಳ್ಳನಿಗೆ ನಂಬಬೇಕೇ ವಿನಃ ಸುಳ್ಳು ಹೇಳುವವರಿಗೆ ನಂಬಬಾರದು ಎಂದು ಹೇಳಿದರು. ಹುಮನಾಬಾದ ಹಿರಿಯ ಸಾಹಿತಿ ಎಚ್. ಕಾಶಿನಾಥರೆಡ್ಡಿ ಮಾತನಾಡಿ,

ಸುರೇಶ ಚನಶೆಟ್ಟಿ ಮಾತಿಗೆ ತಪ್ಪಿ ನಡೆಯುತ್ತಿರುವ ಸುಳ್ಳುಗಾರ. ಏರಿದ ಏಣಿಗೆ ಒದೆಯುವ ಮೋಸಗಾರ. ಮೂರು ವರ್ಷದ ಅವಧಿಯನ್ನು ಐದು ವರ್ಷ ಮಾಡಿಕೊಂಡು, ಎರಡು ಅವಧಿ ಅಧಿಕಾರ ಅನುಭವಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾಲ್ಕಿಯ ಮಾಜಿ ಕಸಾಪ ತಾಲೂಕಾಧ್ಯಕ್ಷ ವಸಂತ ಹುಣಸನಾಳೆ ಮಾತನಾಡಿ, ಸುರೇಶ ಚನಶೆಟ್ಟಿ ಒಬ್ಬ ವಚನಭ್ರಷ್ಟ ಮತ್ತು ಮಹಾಸುಳ್ಳುಗಾರ ಎಂದು ಜರಿದರು.


ಇಡೀ ರಾಜ್ಯದಲ್ಲಿಯೇ ಭಾಲ್ಕಿಯಲ್ಲಿ ಉತ್ತಮ ಸಾಹಿತ್ಯ ಸೇವೆ ಸಲ್ಲಿಸುತ್ತಿರುವ ನನಗೆ ಕಾರಣವಿಲ್ಲದೆ ಅಧಿಕಾರದಿಂದ ಕೆಳಗಿಳಿಸಿ, ಇಡೀ ಕಸಾಪ ಸದಸ್ಯರಿಗೆ ಹಾಗೂ ನನಗೆ ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸದಸ್ಯರಲ್ಲದವರಿಗೂ ಕಸಾಪ ದಲ್ಲಿ ಹುದ್ದೆಗಳನ್ನು ನೀಡುವುದು, ಜಾತ್ರೆಗಳಲ್ಲಿ ಸಮ್ಮೇಳನ ಮಾಡುವುದು, ಮದುವೆಗಳಲ್ಲಿ ಕಸಾಪ ಕಾರ್ಯಕ್ರಮ ಮಾಡುವುದೇ ಚೆನಶೆಟ್ಟಿ ಕಾರ್ಯವಾಗಿದೆ ಎಂದು ಲೇವಡಿ ಮಾಡಿದರು.

ಬಸವ ತತ್ವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೈಜನಾಥ ಕಮಠಾಣೆ ಮಾತನಾಡಿ, ಈ ಬಾರಿ ಡಾ. ರಾಜಕುಮಾರ ಹೆಬ್ಬಾಳೆಯವರನ್ನು ಗೆಲ್ಲಿಸಿಕೊಂಡು ಬರಲು ಪಣ ತೊಟ್ಟಿದ್ದೇವೆ. ಸುರೇಶ ಚನಶೆಟ್ಟಿ ವಚನ ಭ್ರಷ್ಟರಾಗಿ ಬಸವ ತತ್ವಕ್ಕೆ ಅಪಚಾರ ಮಾಡಿದ್ದಾರೆ ಎಂದರು.


ಕಸಾಪ ಸದಸ್ಯ ಪ್ರಭುಶೆಟ್ಟಿ ಬುಳ್ಳಾ ಮಾತನಾಡಿ ಸರ್ಕಾರದಿಂದ ನಿರ್ಮಾಣವಾಗುತ್ತಿರುವ ಕನ್ನಡ ಭವನವನ್ನು ನಾನೇ ನಿರ್ಮಾಣ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವುದು ವಿಪರ್ಯಾಸ ಎಂದರು.


ಹಿರಿಯ ಸಾಹಿತಿ ಶಂಭುಲಿAಗ ಕಾಮಣ್ಣ ಮಾತನಾಡಿ, ಕಳೆದ ಬಾರಿ ಚನಶೆಟ್ಟಿ ಹಾಗೂ ಹೆಬ್ಬಾಳೆಯವರ ಮಧ್ಯೆ ನನ್ನ ಸಮ್ಮುಖದಲ್ಲಿಯೇ ಚರ್ಚೆ ಆಗಿತ್ತು. ನಾನು ಕೂಡಾ ಸಾಕ್ಷಿ ಇದ್ದೇನೆ. ಚನಶೆಟ್ಟಿಯವರು ಐದು ವರ್ಷ ಮಜಾ ಮಾಡಿ, ಈಗ ಮತ್ತೆ ಮಾತಿಗೆ ತಪ್ಪಿ ನಡೆದು ಚುನಾವಣೆಗೆ ಸ್ಪರ್ಧಿಸುತ್ತಿರುವುದು ಸರಿಯಲ್ಲ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ಡಾ. ರಾಜಕುಮಾರ ಹೆಬ್ಬಾಳೆಯವರು ಮಾತನಾಡಿ,ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಈ ಬಾರಿ ನನಗೆ ಒಂದು ಅವಕಾಶ ನೀಡಬೇಕು. ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಂಡು ಹೋಗುವುದರ ಜೊತೆಗೆ ಬೀದರ ಜಿಲ್ಲಾ ಸಾಹಿತಿಗಳ ಹಾಗೂ ಕಲಾವಿದರ ಸೇವೆ ಹಾಗೂ ಕನ್ನಡ ಭವನ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.


ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ರಾಮಕೃಷ್ಣನ್ ಸಾಳೆ, ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ, ಡಾ. ಚನ್ನಬಸಪ್ಪ ಹಾಲಹಳ್ಳಿ, ಬೀದರ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಬಿ.ಜಿ.ಶೆಟಕಾರ, ಡಾ. ಜಗನ್ನಾಥ ಹೆಬ್ಬಾಳೆ, ಡಾ. ಗವಿಸಿದ್ದಪ್ಪ ಪಾಟೀಲ, ಅಶೋಕ ರಾಜೊಳೆ, ಕಲ್ಲಪ್ಪ ಹೂಗಾರ, ಸಂತೋಷ ಹಡಪದ, ಜೈಕಾಂತ ಗಂಗೂಜಿ, ಜೈರಾಜ ಖಂಡ್ರೆ ಮತ್ತಿತರರು ಪಾಲ್ಗೊಂಡಿದ್ದರು.

Latest Indian news

Popular Stories