
ಪಕ್ಷಿಗಳ ಬಾಯಾರಿಕೆ ತೀರಿಸಲು ಮುಂದಾದ ವಿದ್ಯಾರ್ಥಿಗಳು
ಕಲಬುರ್ಗಿ: ಬೇಸಿಗೆ ಸಂದರ್ಭದಲ್ಲಿ ಪ್ರಾಣಿ ಪಕ್ಷಿಗಳು ಬಾಯಾರಿಕೆ ತೀರಿಸಿಕೊಳ್ಳಲು ಚಡಪಡಿಸುತ್ತವೆ. ಇದನ್ನು ಮನಗಂಡ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಕ್ಯಾಂಪಸ್ನಲ್ಲಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯ ಕೈಗೊಂಡು ಮಾದರಿಯಾಗಿದ್ದಾರೆ.
ವಿಶ್ವವಿದ್ಯಾಲಯದ ರಸ್ತೆಗಳ ಸುತ್ತಮುತ್ತ, ಅತಿಥಿಗೃಹ, ಗ್ರಂಥಾಲಯ, ಅಧ್ಯಯನ ವಿಭಾಗಗಳ ಆವರಣ, ಆಡಳಿತ ಭವನ, ಹಾಸ್ಟೆಲ್ ಸೇರಿದಂತೆ ಹಲವು ಸ್ಥಳಗಳಲ್ಲಿ ನೂರಕ್ಕೂ ಹೆಚ್ಚು ಪ್ಲಾಸ್ಟಿಕ್ ಬಾಟಲಿ ಮತ್ತು ಪ್ಲೇಟ್ಗಳನ್ನು ದಾರದಿಂದ ಮರಗಳಿಗೆ ನೇತು ಹಾಕಿ, ಅವುಗಳ ಮೂಲಕ ಹಕ್ಕಿಗಳಿಗೆ ಆಹಾರ ಮತ್ತು ನೀರು ಒದಗಿಸುವ ಕೆಲಸ ಮಾಡುತ್ತಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಗುಬ್ಬಿ, ಕಾಗೆ, ಪಾರಿವಾಳ, ಬುಲ್ಬುಲ್, ಗಿಳಿ, ಕಿಂಗ್ ಫಿಶರ್, ಕ್ಯಾಟಲ್ ಇಗ್ರೇಟ್, ಗ್ರೇಹೆರಾನ್ ಸೇರಿದಂತೆ ಹಲವು ಪ್ರಬೇಧಗಳ ಹಕ್ಕಿಗಳು ಕಂಡುಬರುತ್ತವೆ. ಬೇಸಿಗೆ ಸಂದರ್ಭದಲ್ಲಿ ಅವುಗಳಿಗೆ ಅನುಕೂಲಕರ ನೀರಿನ ಮೂಲಗಳು ಸಿಗುವುದು ಕಡಿಮೆ. ಹೀಗಾಗಿ ಬಾಯಾರಿಕೆಯಿಂದ ಬಳಲುವ ಹಕ್ಕಿಗಳಿಗಾಗಿ ವಿಭಾಗದ ಮುಖ್ಯಸ್ಥ ಪ್ರೊ.ಕೆ.ವಿಜಯಕುಮಾರ, ಪ್ರೊ.ಪೃಥ್ವಿರಾಜ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಈ ಗುಟುಕು ಅಭಿಯಾನ' ಕೈಗೊಂಡಿದ್ದಾರೆ. ಅವರಿಗೆ ವಿಭಾಗದ ಅಧ್ಯಾಪಕರು ಮತ್ತು ಸಿಬ್ಬಂದಿ ಸಂಜುಕುಮಾರ್ ಕಾಂಬ್ಳೆ ಸಹಕಾರ ನೀಡುತ್ತಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಜವಾಬ್ದಾರಿ ನೀಡಲಾಗಿದ್ದು, ಬೆಳಿಗ್ಗೆ ಕಾಲೇಜಿಗೆ ಬರುವ ಮುನ್ನ ಮತ್ತು ಸಂಜೆ ವೇಳೆ ಬಾಟಲಿ, ಪ್ಲೇಟ್ಗಳಲ್ಲಿ ನೀರು, ಆಹಾರಧಾನ್ಯಗಳನ್ನು ಹಾಕುತ್ತಾರೆ. ಮರಗಳಲ್ಲಿರುವ ಅಳಿಲುಗಳೂ ಈ ಸೇವೆಯನ್ನು ಬಳಸಿಕೊಳ್ಳುತ್ತವೆ. 2015ರಲ್ಲಿ ಕ್ಯಾಂಪಸ್ ಆವರಣದ ವಿವಿಧೆಡೆ ಹಕ್ಕಿಗಳು ಸತ್ತು ಬಿದ್ದಿರುವುದು ಕಂಡು ಬಂತು. ಕಾರಣ ಹುಡುಕಿದಾಗ ನಿರ್ಜಲೀಕರಣದಿಂದ ಬಳಲುತ್ತಿರುವ ಸಂಗತಿ ಬೆಳಕಿಗೆ ಬಂತು. ಇದನ್ನು ತಪ್ಪಿಸಲು ಸಲುವಾಗಿ ವಿಭಾಗದ ವಿದ್ಯಾರ್ಥಿಗಳೊಂದಿಗೆ ಪಕ್ಷಿಗಳಿಗೆ ನೀರುಣಿಸುವ ಕಾರ್ಯ ಹಮ್ಮಿಕೊಳ್ಳುತ್ತ ಬರಲಾಗಿದೆ. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದ ಆವರಣಗಳಲ್ಲಿ ಮಣ್ಣಿನ ಮಡಕೆಗಳನ್ನು ಇಡುವ ಯೋಜನೆಯೂ ಇದೆ’ ಎಂದು ಹೇಳುತ್ತಾರೆ ವಿಭಾಗದ ಮುಖ್ಯಸ್ಥ ಪ್ರೊ.ಕೆ.ವಿಜಯಕುಮಾರ.




