300 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು: ಯೋಗಿ ಭವಿಷ್ಯ

ಲಖನೌ: 2022ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಭಾರಿ ಬಹುಮತದೊಂದಿಗೆ ಜಯ ಗಳಿಸಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭವಿಷ್ಯ ನುಡಿದ್ದಾರೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 75ರ ಪೈಕಿ 67ರಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಈ ಐತಿಹಾಸಿಕ ಗೆಲುವು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹಾಗೂ ಲೋಕ ಕಲ್ಯಾಣದ ನೀತಿಗಳ ಪರಿಣಾಮವಾಗಿದೆ ಎಂದು ಹೇಳಿದ್ದಾರೆ.
ಇದು ಉತ್ತರ ಪ್ರದೇಶದಲ್ಲಿ ಸ್ಥಾಪಿತವಾದ ಉತ್ತಮ ಆಡಳಿತ ಹಾಗೂ ಜನರ ನಂಬಿಕೆಯ ಫಲಿತಾಂಶವಾಗಿದೆ. ರಾಜ್ಯದ ಎಲ್ಲ ಜನರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಆಡಳಿತ ಪಕ್ಷವು ಮತದಾರರನ್ನು ಅಪಹರಿಸಿದೆ ಎಂದು ವಿರೋಧ ಪಕ್ಷವಾದ ಸಮಾಜವಾದಿ ಪಕ್ಷದ (ಎಸ್ಪಿ) ಆರೋಪವನ್ನು ತಳ್ಳಿ ಹಾಕಿರುವ ಆದಿತ್ಯನಾಥ್, ಇದು ಬಿಜೆಪಿ ಕಾರ್ಯಕರ್ತರ ಕಠಿಣ ಪರಿಶ್ರಮದ ಫಲ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಪಂಚಾಯತ್ ಚುನಾವಣೆಯಲ್ಲಿ ರಾಜ್ಯ ಚುನಾವಣಾ ಆಯೋಗವು ವಿಜೇತ ಅಭ್ಯರ್ಥಿಗಳ ಪಕ್ಷದ ಚಿಹ್ನೆಯನ್ನು ಪ್ರಕಟಿಸದಿದ್ದರೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 67 ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ ಎಂದು ಸಿಎಂ ಹೇಳಿಕೆ ನೀಡಿದ್ದಾರೆ.

Latest Indian news

Popular Stories

error: Content is protected !!