Election

ಬಸವಕಲ್ಯಾಣ.. ಹೇಗಿದೆ ರಾಜಕೀಯ ಚಿತ್ರ ?

ಬೀದರ್: ಉಪಚುನಾವಣೆಗೆ ಸಜ್ಜಾಗಿರುವ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸ ರೋಚಕವಾಗಿದೆ. ಸಾಮಾಜಿಕ ಸಮಾನತೆಯ ಜೊತೆಗೆ ಲಿಂಗ ಸಮಾನತೆಯನ್ನೂ ಎತ್ತಿ ಹಿಡಿದು, ಮಹಿಳೆಯರನ್ನು ಗೌರವದಿಂದ ಕಂಡ ಬಸವಾದಿ ಶರಣರ ಕ್ರಾಂತಿಯ ನೆಲವಾಗಿರುವುದು ಬಸವಕಲ್ಯಾಣ. ಈ ಕ್ಷೇತ್ರರ ಮತದಾರರು ಎರಡು ಬಾರಿ ಮಹಿಳೆಯನ್ನು ಆಯ್ಕೆ ಮಾಡಿ ಶಾಸನ ಸಭೆಗೆ ಕಳಿಸಿದ ಇತಿಹಾಸವನ್ನು ಹೊಂದಿದ್ದಾರೆ. ಅದೂ ಕ್ಷೇತ್ರದಲ್ಲಿ ನಡೆದ ಮೊದಲ ಚುನಾವಣೆಯಲ್ಲಿಯೇ ಎನ್ನುವುದು ವಿಶೇಷ.
ಬಸವಕಲ್ಯಾಣ ಕ್ಷೇತ್ರದಲ್ಲಿ ಮೊದಲ ವಿಧಾನಸಭೆ ಚುನಾವಣೆ ನಡೆದಿದ್ದು 1957 ರಲ್ಲಿ. ಆಗ ಕಾಂಗ್ರೆಸ್‌ನಿAದ ಸ್ಪರ್ಧಿಸಿದವರು ಶ್ರೀಮತಿ ಅನ್ನಪೂರ್ಣಬಾಯಿ. ಮೊದಲ ಚುನಾವಣೆಯಲ್ಲಿಯೇ ಕ್ಷೇತ್ರದ ಮತದಾರರು ಅನ್ನಪೂರ್ಣಾಬಾಯಿ ಬೆಂಬಲಕ್ಕೆ ನಿಂತರು. ಎರಡನೇ ಚುನಾವಣೆ ನಡೆದಿದ್ದು 1962 ರಲ್ಲಿ. ಆಗಲೂ ಅನ್ನಪೂರ್ಣಾಬಾಯಿ ಗೆದ್ದರು. ಆದರೆ, ನಂತರದ ಚುನಾವಣೆಗಳಲ್ಲಿ ಮಹಿಳೆಯರಿಗೆ ಗೆಲ್ಲುವ ಅವಕಾಶ ಸಿಗಲಿಲ್ಲ.
1967 ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿದ್ರಾಮಪ್ಪ ಸಂಗನಬಸಪ್ಪ ಗೆದ್ದರು. ಎರಡು ಬಾರಿ ಗೆದ್ದಿದ್ದ ಕಾಂಗ್ರೆಸ್‌ನ ಅನ್ನಪೂರ್ಣಬಾಯಿ ಪರಾಭವಗೊಂಡರು. ನಂತರ ಅನ್ನಪೂರ್ಣಾಬಾಯಿ ಅವರು ಚುನಾವಣಾ ರಾಜಕೀಯದಿಂದ ದೂರ ಉಳಿದರು.
1972 ರ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಕಾಂಗ್ರೆಸ್ ಕೈ ಹಿಡಿದರು. 1978 ರ ಚುನಾವಣೆಯಲ್ಲೂ ಹಿಂದಿನ ಫಲಿತಾಂಶ ಪುನರಾವರ್ತನೆಯಾಯಿತು. ಕಾಂಗ್ರೆಸ್ ಅಭ್ಯರ್ಥಿ ಬಾಪುರಾವ ಹುಲಸೂರಕರ್ ಪುನರಾಯ್ಕೆಯಾದರು.
ಆದರೆ, 1983 ರ ಚುನಾವಣೆಯು ಬಸವಕಲ್ಯಾಣ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ಕಾರಣವಾಯಿತು. ಈ ಚುನಾವಣೆಯಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾದ ಬಸವರಾಜ ಪಾಟೀಲ್ ಅಟ್ಟೂರ್ ಅವರು ಸತತ ನಾಲ್ಕು ಚುನಾವಣೆಗಳಲ್ಲಿ ಗೆದ್ದರು. ಸಚಿವರಾಗುವ ಯೋಗವೂ ಅವರಿಗೆ ಲಭಿಸಿತು.
ಬಸವರಾಜ ಪಾಟೀಲ್ ಅಟ್ಟೂರ್ ಅವರು 1983 ರಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. 1985 ರಲ್ಲಿ ಜನತಾಪಕ್ಷದಿಂದ, 1989 ಮತ್ತು 1994 ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು.
1999 ರ ಚುನಾವಣೆಯು ಬಸವಕಲ್ಯಾಣ ಕ್ಷೇತ್ರ ಮಾತ್ರವಲ್ಲ, ಇಡೀ ಜಿಲ್ಲೆಯ ಪಾಲಿಗೆ ಮಹತ್ವದ್ದಾಗಿತ್ತು. ಜಿಲ್ಲೆಯ ಆರೂ ವಿಧಾನಸಭಾ ಕ್ಷೇತ್ರಗಳ ಮತದಾರರು ಸ್ಥಾಪಿತ ನಾಯಕತ್ವದ ವಿರುದ್ಧ ಮತ ಚಲಾಯಿಸಿ, ಹೊಸಬರಿಗೆ ಅವಕಾಶ ನೀಡಿದ್ದರು.
ನಾಲ್ಕು ಸತತ ಗೆಲುವುಗಳ ದಾಖಲೆ ಹೊಂದಿದ್ದ ಬಸವರಾಜ ಪಾಟೀಲ್ ಅಟ್ಟೂರ್ 1999 ರ ಚುನಾವಣೆಯಲ್ಲಿ ಪರಾಭವಗೊಂಡರು. ಔರಾದ, ಹುಮನಾಬಾದ್, ಭಾಲ್ಕಿ, ಬೀದರ್ ಮತ್ತು ಆಗ ಅಸ್ತಿತ್ವದಲ್ಲಿದ್ದ ಹುಲಸೂರು ಕ್ಷೇತ್ರದಲ್ಲೂ ಹೊಸಬರು ಆಯ್ಕೆಯಾದರು.
ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಂ.ಜಿ. ಮುಳೆ ಅವರು 1999 ರಲ್ಲಿ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ಬಸವರಾಜ ಪಾಟೀಲ್ ಅಟ್ಟೂರ್ ಅವರು ಜನತಾದಳ (ಯು) ಅಭ್ಯರ್ಥಿಯಾಗಿದ್ದರು.
2004 ರ ಚುನಾವಣೆಯಲ್ಲಿ ಬಸವಕಲ್ಯಾಣ ಮತದಾರರು ಪುನ: ಬದಲಾವಣೆ ಬಯಸಿದರು. ಈ ಬದಲಾವಣೆ ಅಭ್ಯರ್ಥಿಗೆ ಸೀಮಿತವಾಗಿತ್ತು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಖೂಬಾ ಅವರು ಗೆದ್ದರು. 1999 ರಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಎಂ.ಜಿ. ಮುಳೆ ಅವರು ಕಾಂಗ್ರೆಸ್‌ನಿAದ ಸ್ಪರ್ಧಿಸಿ ಪರಾಭವಗೊಂಡರು.
2008 ರ ಚುನಾವಣೆಯಲ್ಲೂ ಮತದಾರರು ಪುನರಾಯ್ಕೆಯ ಪರ ಮತ ಚಲಾಯಿಸಲಿಲ್ಲ. ಬಿಜೆಪಿಯ ಬಸವರಾಜ ಪಾಟೀಲ್ ಅಟ್ಟೂರ್ ಅವರನ್ನು ಗೆಲ್ಲಿಸಿದರು. 1999 ಮತ್ತು 2004 ರಲ್ಲಿ ಅಟ್ಟೂರ್ ಪರಾಭವಗೊಂಡಿದ್ದರು.
2013 ರಲ್ಲೂ ಬದಲಾವಣೆ ಮುಂದುವರೆಯಿತು. ಜೆಡಿಎಸ್‌ನ ಮಲ್ಲಿಕಾರ್ಜುನ ಖೂಬಾ ಆಯ್ಕೆಯಾದರು. ಈ ಚುನಾವಣೆಯಲ್ಲಿ ಐವರು ಬಲಿಷ್ಠ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತ ವಿಭಜನೆಯೂ ದೊಡ್ಡ ಪ್ರಮಾಣದಲ್ಲಿ ನಡೆಯಿತು. ಕಾಂಗ್ರೆಸ್‌ನ ಬಿ. ನಾರಾಯಣರಾವ್ ಅವರು ಮೊದಲ ಬಾರಿ ಸ್ಪರ್ಧಿಸಿದ್ದರು.
2018 ರ ಚುನಾವಣೆಯಲ್ಲಿ ದೀರ್ಘಾವಧಿಯ ನಂತರ ಕಾಂಗ್ರೆಸ್ ಗೆಲುವು ದಾಖಲಿಸಿತ್ತು. ಜನತಾಪರಿವಾರದ ಭದ್ರ ಕೋಟೆಯಲ್ಲಿ ಬಿ. ನಾರಾಯಣರಾವ್ ಅವರು ಕಾಂಗ್ರೆಸ್ ಧ್ವಜ ಹಾರುವಂತೆ ಮಾಡಿದ್ದರು.
ಅವಧಿ ಪೂರ್ಣಗೊಳ್ಳುವ ಮೊದಲೇ ಶಾಸಕ ಬಿ. ನಾರಾಯಣರಾವ್ ಅವರು ಕೋವಿಡ್‌ನಿಂದಾಗಿ ಮೃತಪಟ್ಟರು. ಇದೀಗ ಉಪಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷವು ದಿ. ಬಿ. ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಅವರನ್ನು ಕಣಕ್ಕಿಳಿಸುತ್ತಿದೆ. ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಬಿಜೆಪಿ ಅಭ್ಯರ್ಥಿ ಘೋಷಣೆ ಬಾಕಿ ಇದೆ.
ಬಸವರಾಜ ಪಾಟೀಲ್ ಅಟ್ಟೂರ್ ಅವರು ಐದು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. 1985 ರಿಂದ ಈಚೆಗೆ ನಡೆದ 8 ಚುನಾವಣೆಗಳಲ್ಲಿ ಎಂ.ಜಿ. ಮುಳೆ ಸ್ಪರ್ಧಿಸಿದ್ದಾರೆ. ಗೆದ್ದಿದ್ದು ಮಾತ್ರೆ ಒಮ್ಮೆ (1999). ಮಲ್ಲಿಕಾರ್ಜುನ ಖುಬಾ ನಾಲ್ಕು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದು, ಎರಡು ಬಾರಿ ಆಯ್ಕೆಯಾಗಿದ್ದಾರೆ.
ಕ್ಷೇತ್ರದ ಮತದಾರರು ಅತೀ ಹೆಚ್ಚು ಬಾರಿ ಲಿಂಗಾಯತ ಅಭ್ಯರ್ಥಿಯನ್ನು ಆಯ್ಕೆಯಾಗಿದ್ದಾರೆ. ಮೂರು ಬಾರಿ ಮರಾಠಾ ಸಮುದಾಯಕ್ಕೆ ಈ ಅವಕಾಶ ಸಿಕ್ಕಿದೆ. 2018 ರ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಹಿಂದುಳಿದ ವರ್ಗಗಳ ನಾಯಕ ಬಿ. ನಾರಾಯಣರಾವ್ ಅವರನ್ನು ಗೆಲ್ಲಿಸಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button