ಅಶೀರುದ್ದೀನ್ ಆಲಿಯಾ ಸಾರ್ತಬೈಲ
“ಆಡು ಜೀವಿದಂ” (ಆಡು ಜೀವನ) ಆಲೆಪುಝ ಜಿಲ್ಲೆಯ ಹರಿಪ್ಪಾದ ಆರಾಟ್ಟುಪುಝ ಪ್ರದೇಶದ ನಜೀಬ್ ಮುಹಮ್ಮದರ ನೈಜ ಘಟನೆಯ ಕುರಿತು ಬೆನ್ಯಾಮಿನ್ ಬರೆದ ಐತಿಹಾಸಿಕ ಕಾದಂಬರಿ. 2008 ರಲ್ಲಿ ಬಿಡುಗಡೆಯಾಗಿ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಮಾರಾಟವಾದ ಪುಸ್ತಕ. ಕೇರಳ ಸಾಹಿತ್ಯ ಅಕಾಡೆಮಿ ಪುರಸ್ಕೃತ ಈ ಕೃತಿಯನ್ನು ಡಾ. ಅಶೋಕ್ ಕುಮಾರ್ ರವರು ಸುಂದರವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ಈ ಹಿಟ್ ಕಾದಂಬರಿಯನ್ನು ಹದಿನಾರು ವರ್ಷಗಳ ಪರಿಶ್ರಮದಿಂದ ಖ್ಯಾತ ಮಲೆಯಾಳಂ ನಿರ್ದೇಶಕ ಬ್ಲೆಸ್ಸಿ ಸಿನಿಮಾ ಮಾಡಿದ್ದಲ್ಲದೆ ಪೃಥ್ವಿ ರಾಜ್ ಎಂಬ ನಟನಲ್ಲಿ ಹುದುಗಿದ್ದ ಅಭಿನಯ ಸಾಮರ್ಥ್ಯವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಪೃಥ್ವಿಯ ಕರಿಯರ್ ನಲ್ಲಿ ಮಹತ್ವದ ಸಿನಿಮಾ ಅದಕ್ಕಾಗಿ ಅವರು ಮಾಡಿದ ತ್ಯಾಗ ಶ್ಲಾಘನೀಯ. ಬ್ಲೆಸ್ಸಿ ಮತ್ತು ಪೃಥ್ವಿ ಆಡುಜೀವಿತಂ ಚಿತ್ರದಲ್ಲಿ ಒಂದೇ ನಾಣ್ಯದ ಎರಡು ಮುಖಗಳು.
ಜೀವನ ಮಟ್ಟ ಸುಧಾರಿಸಿಕೊಳ್ಳಲು ಮನೆ ಮತ್ತು ಒಡವೆಯನ್ನು ಅಡವಿಟ್ಟು ವಿದೇಶಿ ಯಾತ್ರೆ ಆರಂಭಿಸಿದ ನವ ವಿವಾಹಿತನಾಗಿದ್ದ ನಜೀಬ್ ಮತ್ತು ಅವನ ಗೆಳೆಯ ಹಕೀಂ ವಿಮಾನ ನಿಲ್ದಾಣದಲ್ಲಿ ಕಫೀಲ್ (ಸ್ಪೋನ್ಸರ್) ಒಬ್ಬನ ವಂಚನೆಗೊಳಪಟ್ಟು ಮರುಭೂಮಿಯಲ್ಲಿ ಆಡು ಮೇಯಿಸುವ ಜೀತ ತನಕ್ಕೆ ನೂಕಲ್ಪಡುತ್ತಾನೆ.
ಸೌದಿ ಅರೇಬಿಯಾದ ಮರುಭೂಮಿಯಲ್ಲಿರುವ ಮಸ್ರಾದಲ್ಲಿ ಮೂರು ವರೆ ವರ್ಷಗಳ ಕಾಲ ಅಂದರೆ 1992 ರಿಂದ 1995ರ ವರೇಗೆ ತಾನು ಅನುಭವಿಸಿದ ಅಮಾನವೀಯ ಯಾತನೆಯ ನೈಜ ಘಟನೆಯ ಅನಾವರಣವೇ ‘ಆಡು ಜೀವಿತಂ’ (ಆಡು ಜೀವನ).
ಈ ಸತ್ಯ ಘಟನೆಯನ್ನು ದೃಶ್ಯಾವಿಷ್ಕಾರಗೊಳಿಸಿದ ನಿರ್ದೇಶಕ ಬ್ಲೆಸ್ಸಿ ಮತು ನಜೀಬನಾಗಿ ಕಥೆಯ ಒಳ ಹೊಕ್ಕ ಪೃಥ್ವಿ ರಾಜ್ ಈ ಸಿನಿಮಾದ ಮೆರುಗು. ಎ ಆರ್ ರೆಹಮಾನರ ಸಂಗೀತ ರಸೂಲ್ ಪೂಕುಟ್ಟಿಯ ಸೌಂಡ್ ಮಿಕ್ಸಿಂಗ್ ಸಿನಿ ಮಂದಿರದಲ್ಲಿ ಅಲುಗಾಡದಂತೆ ಹಿಡಿದಿಡುತ್ತದೆ. ಸುನಿಲ್ ಕೆ. ಎಸ್ ರ ಅತ್ಯುತ್ತಮ ಛಾಯಾಗ್ರಾಹದಿಂದಾಗಿ ‘ದಿ ಗೋಟ್‌ಲೈಫ್’ ಮಲೆಯಾಳಂ ಸಿನಿಮಾದ ಒಂದು ಮೈಲಿಗಲ್ಲು ಎಂದರೂ ತಪ್ಪಾಗಲಾರದು. 16 ವರ್ಷಗಳ ಪ್ರಯತ್ನಕ್ಕೆ ಸಂದ ಫಲ.
ಆಡುಜೀವಿತಂ ನಲ್ಲಿ ಪೂರ್ತಿ ನಜೀಬನಾಗಿರುವ ಪೃಥ್ವಿ ರಾಜನ ಕಣ್ಣು ಮಾತ್ರ ಮಾತನಾಡುತ್ತದೆ. ಸಿನಿಮಾದಲ್ಲಿ ಮಾತು ಕಡಿಮೆಯಾದರೂ ಭಾವನೆಗಳು ನಮ್ಮೊಳಗಿನ ಮಾನವೀಯತೆಯನ್ನು ಕೆರಳಿಸುತ್ತದೆ. ದುಃಖ ಉಮ್ಮಳಿಸಿಕೊಂಡು ಬರುತ್ತದೆ. ಹಳ್ಳಿ ಜೀವನದ ಸೌಂದರ್ಯ ದಿಂದ ಮರುಭೂಮಿಯಲ್ಲಿನ ಒದ್ದಾಟದ ಪ್ರತಿಹಂತವು ನಮ್ಮ ಕಣ್ಣು ಒದ್ದೆಯಾಗುತ್ತದೆ. ಪ್ರೀತಿ, ನೋವು, ಯಾತನೆ ಯಲ್ಲಿ ತನ್ನೊಳಗಿನ ನಜೀಬನ್ನು ಹುಡುಕುವ ತವಕದಲ್ಲಿ ಪೃಥ್ವಿ ರಾಜ್ ವಾಸ್ತವಕ್ಕೆ ಬಹಳ ಹತ್ತಿರವಾಗಿ ನಟಿಸಿದ್ದಾರೆ. ಮರುಭೂಮಿಯಲ್ಲಿ ಯಾತನೆ ಅನುಭವಿಸುವ ಪ್ರತಿ ಘಳಿಗೆಯಲ್ಲಿ ಪ್ರತಿಯೊಬ್ಬನೂ ನಜೀಬ್ ಆಗಿ ಬದಲಾಗುತ್ತಾರೆ.
ಒಟ್ಟಿನಲ್ಲಿ ನೆಗೆಟಿವಿಟಿ ಇಲ್ಲದ ಸಿನಿಮಾ ಎನ್ನಬಹುದು. ಬೆನ್ಯಾಮಿನ್ ರ ಕಾದಂಬರಿ ಓದಿದವರು ಖಂಡಿತ ಭಾವುಕರಾಗುವರು. ಕಥೆ ಪೂರ್ತಿ ತಲೆಯಲ್ಲಿದ್ದರೂ ಪ್ರತಿ ಕ್ಷಣಕ್ಕೂ ಕುತೂಹಲ, ವ್ಯಥೆ ಆವರಿಸುತ್ತದೆ. ಅರ್ಬಾಬ್ ನಜೀಬ್ ಗೆ ಹಿಂಸೆ ನೀಡುವಾಗ ನಮಗೆ ನೋವಾಗುತ್ತದೆ ಭಯ ಕಾಡುತ್ತದೆ.
ಆಡಿನ ದೊಡ್ಡಿಯೊಳಗಿನ ನಿರರ್ಥಕ ಬದುಕಿನಲ್ಲಿ ವರ್ಷಗಳ ಬಳಿಕ ಹಕೀಮನ ಅನಿರೀಕ್ಷಿತ ಭೇಟಿ ನಜೀಬನಲ್ಲಿ ಬದುಕುವ ಆಸೆ ಚಿಗುರಿಸುತ್ತದೆ. ಬದುಕುಳಿಯುವ ಸಾಹಸಕ್ಕೆ ಆಫ್ರಿಕಾದ ಇಬ್ರಾಹಿಂ ಕಾದಿರಿಯೂ ಜೊತೆಯಾಗುತ್ತಾರೆ. ಮಸ್ರಾದ ನರಕದಿಂದ ತಪ್ಪಿಸಿಕೊಳ್ಳುವ ಕೊನೇಯ ಅವಕಾಶದಲ್ಲೂ ನನ್ನನ್ನೇ ನಂಬಿಕೊಂಡಿರುವ ಆಡು, ಒಂಟೆಗಳು ಹಸಿದಿದ್ದು ಸಾಯಬಾರದೆಂದು ಹುಲ್ಲು ನೀಡಿ ನೀರುಣಿಸುವ ನಜೀಬನ ಉದಾತ್ತ ಹೃದಯವಂತಿಕೆಗೆ ಮನಸ್ಸು ನಿಜಕ್ಕೂ ಕರಗುತ್ತದೆ.
ಕಫೀಲನ ಮಗಳ ಮದುವೆಯ ದಿನದಂದು ನಿಗದಿಪಡಿಸಿದಂತೆ ಮೂವರೂ ತಪ್ಪಿಸಿಕೊಳುತ್ತಾರೆ. ಗೊತ್ತು ಗುರಿಯಿಲ್ಲದೆ ಮರುಭೂಮಿಯ ಸುಡುವ ಮರಳು ದಿಂಡೆಯ ಮೇಲೆ ಅವರ ಸರ್ವೈವ್ (survive) ಆರಂಭವಾಗುತ್ತದೆ. ಬದುಕುವ ದಾರಿ ಹುಡುಕಿ ಹೊರಟ ನಜೀಬನಿಗೆ ದಾಹವಾದಾಗ, ಹಸಿದಾಗ ದಣಿವಾದಾಗ, ಮರೀಚಿಕೆ ಕಂಡು ಓಡುವಾಗ ನಾವು ಓಡುತ್ತೇವೆ. ನಮಗೂ ಮರುಭೂಮಿಯ ವಿಷಪೂರಿತ ಹಾವು ಕಚ್ಚಿದಂತೆ, ಸುಂಟರಗಾಳಿ ಬಡಿದಂತಾಗುತ್ತದೆ. ನಜೀಬ್ ಎಂಬ ಪಾತ್ರದೊಂದಿಗೆ ಸಂಚರಿಸುವ ವಿಚಿತ್ರ ಅನುಭವವನ್ನು ಈ ಚಿತ್ರ ನೀಡುತ್ತದೆ.
“ನಡೆಯೋಣ ಸಾಯುವ ವರೇಗೆ” ಎಂಬ ಇಬ್ರಾಹಿಂ ಕಾದಿರಿಯ ಸ್ಪೋರ್ತಿದಾಯಕ ಮಾತು ಬಹುಷಃ ನಜೀಬನಿಗೆ ಮತ್ತೆ ಜೀವ ನೀಡಿರಬಹುದು. ನಜೀಬನ ಕಾಲು ಸೋಲದಿರಲು ಕಾರಣವಾಗಿರಬಹುದು. ಬದುಕುವ ಹಂಬಲದ ಓಡಾಟದಲ್ಲಿ ಭರವಸೆ ಕಳೆದುಕೊಳ್ಳಬಾರದು ಎಂಬ ಸಂದೇಶವನ್ನು ಆಡು ಜೀವಿದಂ ನೀಡುತ್ತದೆ.
ರಸ್ತೆಯ ಮೇಲೆ ಬಿದ್ದ ನಜೀಬನ್ನು ನಗರಕ್ಕೆ ಸೇರಿಸುವ ಅರಬಿಯ ಒಳ್ಳೆಯ ಗುಣ ಹಕೀಮ್ ನ ಸಾವು ಇಬ್ರಾಹಿಂ ಕಾದಿರಿಯ ತ್ಯಾಗ ಸಿನಿಮಾ ಮುಗಿದ ಮೇಲೂ ಸದಾ ನೆನಪಲ್ಲಿ ಉಳಿಯುತ್ತದೆ.
ಮೂರು ವರೆ ವರ್ಷಗಳ ಬಳಿಕ ತನ್ನ ಬಳಿ ಬಂದ ನಜೀಬನ್ನು ಸೈನು ಹೇಗೆ ಸ್ವೀಕರಿಸಿದ್ದಳು? ಹಕೀಂ ನ ತಾಯಿ ಹೇಗಿದ್ದಾರೆ? ಇಬ್ರಾಹಿಂ ಏನಾದ? ಇತ್ಯಾದಿ ಪ್ರಶ್ನೆಗಳು ಮತ್ತೆ ಮತ್ತೆ ಕಾಡುತ್ತದೆ. ಆಡು ಜೀವಿದಂ ಕೇರಳದ ಒಬ್ಬ ನಜೀಬನ ಕಥೆಯಲ್ಲ ಬದಲಾಗಿ ಯಾವ ಬರಹಗಾರನಿಗೂ ಸಿಗದೆ ಕಫೀಲನ ಒದೆ ತಿಂದು ಮರುಭೂಮಿಯ ಮರಳಿನಡಿಯಲ್ಲಿ ಮಣ್ಣಾಗಿ ಹೋದ ನೂರಾರು ನಿಸ್ಸಹಾಯಕರಾದ ಮನುಷ್ಯರ ಕಥೆ. ನಾವು ಯಾರೂ ಕಂಡರಿಯದ ಕಥೆ. ಖಂಡಿತವಾಗಿ ಎಲ್ಲರೂ ನೋಡಲೇ ಬೇಕಾದ ಸಿನಿಮಾ.