ಇಂಗ್ಲೆಂಡ್ ವಿರುದ್ಧ 4 ವಿಕೆಟ್ ಗಳ ಜಯ; ಭಾರತ ಕ್ರಿಕೆಟ್ ತಂಡದ ಮುಡಿಗೇರಿದ ಐಸಿಸಿ ಅಂಡರ್-19 ವಿಶ್ವಕಪ್‌!

ಆಂಟಿಗುವಾ: ಭಾರತದ ಕಿರಿಯರ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಅಂಡರ್-19 ವಿಶ್ವಕಪ್ ನ್ನು ತನ್ನದಾಗಿಸಿಕೊಂಡಿದೆ.

ಟಾಸ್ ನಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡ ಬ್ಯಾಟ್ಸ್ ಮನ್ ಗಳಿಗೆ ಭಾರತೀಯ ಬೌಲರ್ ಗಳು ಸವಾಲಾಗಿ ಪರಿಣಮಿಸಿದರು. ಪರಿಣಾಮ 44.5 ಓವರ್ ಗಳಿಗೆ ಇಂಗ್ಲೆಂಡ್ ತಂಡ 189 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಜೇಮ್ಸ್ ರೆವ್ ನ 95 ರನ್ ಗಳು ಹಾಗೂ ಸೇಲ್ಸ್ ನೊಂದಿಗೆ 93 ರನ್ ಗಳ ಜೊತೆಯಾಟ ಇಂಗ್ಲೆಂಡ್ ಗೆ ಸಹಕಾರಿಯಾಯಿತು.

ಭಾರತದ ಪರ ಬೌಲಿಂಗ್ ವಿಭಾಗದಲ್ಲಿ ರವಿ ಕುಮಾರ್ 34 ರನ್ ಗಳನ್ನು ನೀಡಿ 4 ವಿಕೆಟ್ ಹಾಗೂ ರಾಜ್ ಬಾವ 31 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು, ಇಬ್ಬರೂ ಬೌಲರ್ ಗಳು ತಲಾ 1 ಮೇಡಿನ್ ಓವರ್ ಮಾಡಿದರು.

ಇಂಗ್ಲೆಂಡ್ ತಂಡ ನೀಡಿದ್ದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಆಂಗ್ಕ್ರಿಶ್ ರಘುವಂಶಿ ಎರಡು ಎಸೆತಗಳನ್ನು ಎದುರಿಸಿ ಯಾವುದೇ ರನ್ ಗಳಿಸದೇ ವಿಕೆಟ್ ನೀಡಿದ್ದು ಆರಂಭಿಕ ಆಘಾತವಾಯಿತು. ಮತ್ತೋರ್ವ ಆರಂಭಿಕ ಆಟಗಾರ ಹರ್ನೂರ್ ಸಿಂಗ್ ಸಹ 46 ಎಸೆತಗಳನ್ನು ಎದುರಿಸಿ 21 ರನ್ ಗಳ ಸಾಧಾರಣ ಮೊತ್ತವನ್ನು ಕಲೆಹಾಕಿದ್ದು, 2 ನೇ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಹೆಚ್ಚಿಸಿತ್ತು.

ಈ ನಂತದಲ್ಲಿ 84 ಎಸೆತಗಳನ್ನು ಎದುರಿಸಿ 50 ರನ್ ಗಳಿಸುವ ಮೂಲಕ ಶೇಖ್ ರಶೀದ್ ತಂಡಕ್ಕೆ ಚೇತರಿಕೆ ನೀಡಿದರಾದರೂ ಯಶ್ ಧುಲ್ ಉತ್ತಮ ಜೊತೆಯಾಟ ನೀಡಲು ಸಾಧ್ಯವಾಗಲಿಲ್ಲ. ನಂತರ, ನಿಶಾಂತ್ ಸಿಂಧು 54 ಎಸೆತಗಳಲ್ಲಿ 50 ರನ್ ಗಳಿಸಿ ತಂಡದ ಗೆಲುವಿನ ಕನಸನ್ನು ಜೀವಂತವಾಗಿರಿಸಿದರು. ರಾಜ್ ಬಾವ 54 ಎಸೆತಗಳಲ್ಲಿ 34 ರನ್ ಗಳಿಸಿದರೆ, ನಿಶಾಂತ್ ಸಿಂಧು ಹಾಗೂ ದಿನೇಶ್ ಬನಾ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತ ಇಂಗ್ಲೆಂಡ್ ತಂಡದ ವಿರುದ್ಧ 6 ವಿಕೆಟ್ ಗಳ ಜಯ ಸಾಧಿಸುವ ಮೂಲಕ ಮತ್ತೊಮ್ಮೆ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ ನ್ನು ಮುಡಿಗೇರಿಸಿಕೊಂಡಿದೆ.

2018 ರಲ್ಲಿ ಪೃಥ್ವಿ ಶಾ ನೇತೃತ್ವದಲ್ಲಿ ಭಾರತ ಅಂಡರ್-19 ಕ್ರಿಕೆಟ್ ತಂಡ ಆಸ್ಟ್ರೇಲಿಯಾ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿ ವಿಶ್ವಕಪ್ ನ್ನು ತನ್ನದಾಗಿಸಿಕೊಂಡಿತ್ತು. 2022 ರ ಗೆಲುವಿನ ಮೂಲಕ ಭಾರತ ಅಂಡರ್ 19 ತಂಡ 5 ನೇ ಬಾರಿಗೆ ಅಂಡರ್ 19 ವಿಶ್ವಕಪ್ ಗೆದ್ದಿದೆ.

Latest Indian news

Popular Stories