ಇಹಲೋಕ ತ್ಯಜಿಸಿದ್ರು ನಾಲ್ವರಿಗೆ ಜಗತ್ತು ನೋಡುವಂತೆ ಮಾಡಿದ ಅಪ್ಪು

ಬೆಂಗಳೂರು: ಸಾವಿನಲ್ಲೂ ಸಾರ್ಥಕತೆಯನ್ನು ನಟ ಪುನೀತ್ ರಾಜ್ ಕುಮಾರ್ ಮೆರೆದಿದ್ದಾರೆ. ಅವರಿಂದಾಗಿ ನಾಲ್ವರು ಜಗತ್ತನ್ನು ಇಂದು ನೋಡುವಂತಾಗಿದೆ. ಪುನೀತ್ ರಾಜ್ ಕುಮಾರ್ ಅವರ ಎರಡು ಕಣ್ಣುಗಳಿಂದ ನಾಲ್ವರು ಅಂಧಹೀನರಿಗೆ ಅತ್ಯಾಧುನಿಕ ಹೊಸ ಅತ್ಯಾಧುನಿಕ ತಂತ್ರಜ್ಞಾನ ಮೂಲಕ ದೃಷ್ಟಿ ನೀಡಲಾಗಿದೆ.

ಎರಡು ಕಣ್ಣುಗಳನ್ನು ಭಾಗಗಳನ್ನಾಗಿ ಮಾಡಿ ನಾಲ್ವರಿಗೆ ದೃಷ್ಟಿಯನ್ನು ನೀಡಲಾಗಿದೆ ಎಂದು ನಾರಾಯಣ ನೇತ್ರಾಯಲಯ ಡಾ ಭುಜಂಗ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಸಾಮಾನ್ಯವಾಗಿ ನೇತ್ರದಾನ ಮಾಡಿದವರ ಕಣ್ಣುಗಳನ್ನು ಇಬ್ಬರಿಗೆ ನೀಡುತ್ತೇವೆ. ಆದರೆ ಅಪ್ಪು ಅವರ ಕಣ್ಣುಗಳನ್ನು ವಿಭಿನ್ನವಾಗಿ ಶಸ್ತ್ರಕ್ರಿಯೆ ಮಾಡಿ ನಾಲ್ವರಿಗೆ ನೀಡಿದ್ದೇವೆ. ಇದು ನಾವು ಮಾಡಿರುವ ಮೊದಲ ಪ್ರಯತ್ನ, ಅತ್ಯಾಧುನಿಕ ಶಸ್ತ್ರಕ್ರಿಯೆ ಮೂಲಕ ಈ ರೀತಿ ಮಾಡಲಾಗಿದೆ. ನಮಗೆ ನಮ್ಮ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದ್ದು ಬಹಳ ಖುಷಿಯಾಗುತ್ತಿದೆ. ಪುನೀತ್ ರಾಜ್ ಕುಮಾರ್ ಅವರ ಕಣ್ಣುಗಳು ಬಹಳ ಆರೋಗ್ಯವಾಗಿದ್ದರಿಂದ ಇದು ಸಾಧ್ಯವಾಯಿತು, ಅವರ ಕಣ್ಣುಗಳನ್ನು ಪಡೆದವರು ಚೆನ್ನಾಗಿದ್ದಾರೆ, ಒಬ್ಬ ಮಹಿಳೆ ಮತ್ತು ಮೂವರು ಪುರುಷರಿಗೆ ಕಣ್ಣುಗಳನ್ನು ದಾನಮಾಡಿದ್ದು ಎಲ್ಲರೂ ವಯಸ್ಕರಾಗಿದ್ದಾರೆ ಎಂದರು.

ಮೊನ್ನೆ ಶನಿವಾರ ಒಂದು ದಿನವಿಡೀ ಈ ಶಸ್ತ್ರಕ್ರಿಯೆಗೆ ಸಮಯ ಹಿಡಿಯಿತು, ಈ ಶಸ್ತ್ರಕ್ರಿಯೆಯನ್ನು ಯಶಸ್ವಿಯಾಗಿ ಮಾಡಿದ ವೈದ್ಯರ ತಂಡಕ್ಕೆ ಧನ್ಯವಾದಗಳು ಎಂದರು.

ಮೊಟ್ಟಮೊದಲು ಡಾ ರಾಜ್ ಕುಮಾರ್ ಕುಟುಂಬಕ್ಕೆ ನಾನು ಧನ್ಯವಾದಗಳನ್ನು ಹೇಳುತ್ತೇನೆ. 1994ರಲ್ಲಿ ಅವರ ಕುಟುಂಬ ನಮ್ಮ ನಾರಾಯಣ ನೇತ್ರಾಲಯದಲ್ಲಿ ಡಾ ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರು ಸೇರಿ ಡಾ ರಾಜ್ ಕುಮಾರ್ ನೇತ್ರದಾನ ಕೇಂದ್ರ ಉದ್ಘಾಟಿಸಿದರು. 2006ರಲ್ಲಿ ಅಣ್ಣಾವ್ರು ತೀರಿಕೊಂಡಾಗ ಅವರ ಕಣ್ಣುಗಳು ದಾನವಾದವು. 2017ರಲ್ಲಿ ಪಾರ್ವತಮ್ಮನವರು ತೀರಿಹೋದಾಗ ಅವರ ಕಣ್ಣುಗಳು ದಾನವಾದವು. ಮೊನ್ನೆ ಶುಕ್ರವಾರ ಪುನೀತ್ ಅವರ ಜೀವನ ದುರಂತದಲ್ಲಿ ಕೊನೆಯಾದಾಗ ಆ ದುಃಖದ ಮಧ್ಯೆ ಕೂಡ ನಮ್ಮ ಸಂಸ್ಥೆಗೆ ನೇತ್ರದಾನ ಮಾಡಿದರು. ಇದಕ್ಕೆ ಡಾ ರಾಜ್ ಕುಟುಂಬಕ್ಕೆ ನಾನು ಧನ್ಯವಾದಗಳನ್ನು ಹೇಳುತ್ತೇನೆ ಎಂದರು.

Latest Indian news

Popular Stories