ಓಮಿಕ್ರಾನ್ ಎದುರಿಸಲು ದೆಹಲಿ ಸನ್ನದ್ಧ, 30,000 ಆಮ್ಲಜನಕ ಹಾಸಿಗೆಗಳು, 10,000 ಐಸಿಯು ಸಿದ್ಧ: ಕೇಜ್ರಿವಾಲ್

ನವದೆಹಲಿ: ಕೋರೊನಾ ರೂಪಾಂತರಿ ಓಮಿಕ್ರಾನ್​​ ಪ್ರಕರಣ ಇಲ್ಲಿಯವರೆಗೆ ಭಾರತದಲ್ಲಿ ಪತ್ತೆಯಾಗಿಲ್ಲ. ಆದರೆ ರಾಷ್ಟ್ರ ರಾಜಧಾನಿಗೆ ಅದು ಕಾಲಿಡುವ ಮೊದಲೇ ದೆಹಲಿ ಸರ್ಕಾರ ಕೆಲವೊಂದು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.

ಓಮಿಕ್ರಾನ್ ಆತಂಕಕ್ಕೆ ಸಂಬಂಧಿಸಿದಂತೆ ಮಂಗಳವಾರ ಉನ್ನತ ಮಟ್ಟದ ಸಭೆ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೋವಿಡ್ -19 ರ ಹೊಸ ರೂಪಾಂತರ ‘ಓಮಿಕ್ರಾನ್’ ಭಾರತಕ್ಕೆ ಬರುವ ಸಾಧ್ಯತೆಯಿಲ್ಲ. ಆದರೆ ಜವಾಬ್ದಾರಿಯುತ ಸರ್ಕಾರವಾಗಿ ನಾವು ಬರುವ ಅಪಾಯ ಎದುರಿಸಲು ಸಿದ್ಧರಾಗಿರಬೇಕು ಎಂದು ಹೇಳಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ‘ಓಮಿಕ್ರಾನ್’ ಬೆದರಿಕೆಯ ಹಿನ್ನೆಲೆಯಲ್ಲಿ ನಾನು ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಹಾಸಿಗೆಗಳಿಗೆ ಸಂಬಂಧಿಸಿದಂತೆ ನಾವು 30,000 ಆಮ್ಲಜನಕ ಹಾಸಿಗೆಗಳನ್ನು ಸಿದ್ಧಪಡಿಸಿದ್ದೇವೆ ಮತ್ತು ಇವುಗಳಲ್ಲಿ ಸುಮಾರು 10,000 ICU ಹಾಸಿಗೆಗಳು ಇವೆ ಎಂದರು.

ಇನ್ನೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಓಮಿಕ್ರಾನ್ ರೂಪಾಂತರವು ಭಾರತಕ್ಕೆ ಪ್ರವೇಶಿಸುವುದನ್ನು ತಡೆಯಲು ಸೋಂಕಿತ ದೇಶಗಳಿಂದ ಬರುವ ವಿಮಾನಗಳನ್ನು ನಿಷೇಧಿಸುವಂತೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯ ಅವರಿಗೆ ಮನವಿ ಮಾಡಿದ್ದಾರೆ.

ಅಂತಾರಾಷ್ಟ್ರೀಯ ವಿಮಾನಯಾನವನ್ನು ನಿರ್ಬಂಧಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದರ ಹಿಂದಿನ ಕಾರಣವೇನು. ಮೊದಲ ಅಲೆಯಲ್ಲಿ ಸಹ ವಿದೇಶಿ ವಿಮಾನಗಳ ಹಾರಾಟ ನಿಲ್ಲಿಸುವುದನ್ನು ವಿಳಂಬಗೊಳಿಸಲಾಯಿತು. ಹೆಚ್ಚಿನ ವಿದೇಶಿ ವಿಮಾನಗಳು ದೆಹಲಿಗೆ ಬರುತ್ತವೆ. ಆದ್ದರಿಂದ ದೆಹಲಿ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಪ್ರಧಾನಿಯವರೇ ದಯವಿಟ್ಟು ತಕ್ಷಣವೇ ವಿಮಾನಗಳನ್ನು ನಿಲ್ಲಿಸಿ ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Latest Indian news

Popular Stories