ಟಿ-20 ಸರಣಿ: ಭಾರತಕ್ಕೆ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು; ಸರಣಿ ವಶ

ನಾಟಿಂಗ್ಹ್ಯಾಮ್: ನಾಟಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ 3 ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಗೆ 17 ರನ್ ಗಳ ಜಯ ದೊರೆತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡ ಭಾರತಕ್ಕೆ 216 ರನ್ ಗಳ ಬೃಹತ್ ರನ್ ಗಳ ಗುರಿ ನೀಡಿತ್ತು. 

ಇಂಗ್ಲೆಂಡ್ ನ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ (12 ಎಸೆತಗಳಲ್ಲಿ 11 ರನ್) ರಿಷಭ್ ಪಂತ್ (5 ಎಸೆತಗಳಲ್ಲಿ 1 ರನ್)  ಗಳಿಸಿ ಪೆವಿಲಿಯನ್ ನತ್ತ ನಡೆದಿದ್ದು ಆರಂಭಿಕ ಆಘಾತ ನೀಡಿತು.
 
ವಿರಾಟ್ ಕೊಹ್ಲಿ (6 ಎಸೆತಗಳಲ್ಲಿ 11 ರನ್) ಸಹ ಬೇಗ ವಿಕೆಟ್ ಒಪ್ಪಿಸಿದ್ದು ನಿರಾಶೆ ಮೂಡಿಸಿತು. ಆದರೆ ಸೂರ್ಯಕುಮಾರ್ ಯಾದವ್ (55 ಎಸೆತಗಳಲ್ಲಿ 117 ರನ್) ಗಳಿಸಿ ತಂಡದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದರು. ಆದರೆ ನಂತರ ಬಂದ ಬ್ಯಾಟ್ಸ್ಮನ್ ಗಳ ವೈಫಲ್ಯದ ಪರಿಣಾಮವಾಗಿ  ಸೂರ್ಯಕುಮಾರ್ ಯಾದವ್ ಅವರದ್ದು ಏಕಾಂಗಿ ಹೋರಾಟವಾಯಿತು. ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಇಂಗ್ಲೆಂಡ್ ಬೌಲರ್ ಗಳು ಅಂತಿಮವಾಗಿ 20 ಓವರ್ ಗಳಲ್ಲಿ ಭಾರತ ತಂಡವನ್ನು 9 ವಿಕೆಟ್ ಗಳ ನಷ್ಟಕ್ಕೆ 198 ರನ್ ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. 

ಟಿ20 ಸರಣಿಯ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡ ಸರಣಿ ಕೈವಶ ಮಾಡಿಕೊಂಡರೆ, ಕೊನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಇಂಗ್ಲೆಂಡ್ ವೈಟ್ ವಾಶ್ ಮುಖಭಂಗದಿಂದ ಪಾರಾಗಿದೆ. ಸರಣಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಭುವನೇಶ್ವರ್ ಕುಮಾರ್ ಭಾಜನರಾದರೆ, ರೀಸ್ ಟೋಪ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

Latest Indian news

Popular Stories